Wednesday, 1st December 2021

ನೂರು ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ನಾಳೆ ಶೃಂಗೇರಿ ಬಂದ್

ಚಿಕ್ಕಮಗಳೂರು: ಶ್ರೀ ಶಾರದಾ ದೇವಿ ನೆಲೆ ಬೀಡಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ನೂರು ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಅ.22 ರಂದು ಶೃಂಗೇರಿ ಬಂದ್ ಗೆ ಆಸ್ಪತ್ರೆ ಹೋರಾಟ ಸಮಿತಿ ಕರೆ ನೀಡಿದೆ.

ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಒತ್ತಾಯಿಸಿ ಕರೆ ನೀಡಿರುವ ಬಂದ್ ಗೆ ಆಟೋ ಚಾಲಕರ ಸಂಘ, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದೆ.

ಕಳೆದ 14 ವರ್ಷಗಳ ಬೇಡಿಕೆ ಹಾಗೂ ಕಳೆದ 1 ವರ್ಷ 3 ತಿಂಗಳಿನ ನಿರಂತರ ಪ್ರಯತ್ನದ ನಂತರವೂ ಶೃಂಗೇರಿ ನೂರು ಬೆಡ್ ಆಸ್ಪತ್ರೆ ಪ್ರಕ್ರಿಯೆ ಪೂರ್ಣ ಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆ ನೀಡಿದರೆ ಹೊರತು ಇದುವರೆಗೆಆಸ್ಪತ್ರೆ ನಿರ್ಮಾಣ ಸಂಬಂಧ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

ಹೋರಾಟದ ಮೊದಲನೇ ಭಾಗವಾಗಿ ಕೋವಿಡ್ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ ರಾಜಕೀಯೇತರವಾಗಿ ಹೋರಾಟ ನಡೆಸಿದ್ದು ನಂತರದಲ್ಲಿ ಕಳೆದ ಒಂದು ವರ್ಷದಿಂದ ಎಲ್ಲಾ ಅಧಿಕಾರಿಗಳು,ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಿ ಹಲವು ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ.

ಸಾಮಾಜಿಕ ಕಳಕಳಿಯುಳ್ಳ ಎಲ್ಲಾ ಸಾರ್ವಜನಿಕರು ಇದರಲ್ಲಿ ಭಾಗಿಯಾಗಬೇಕು ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಮನವಿ ಮಾಡಿದೆ. ಸ್ಥಳಕ್ಕೆ ಖುದ್ದು ಜಿಲ್ಲಾಧಿಕಾರಿಗಳು ಬರುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ , ಶೃಂಗೇರಿ ಪಟ್ಟಣದಲ್ಲಿ ಕೂಡಲೇ ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಸಂಬಂಧ ಜನಪ್ರತಿನಿಧಿಗಳು, ಸಚಿವರು, ಶಾಸಕರು ತುರ್ತಾಗಿ ಗಮನ ಹರಿಸಬೇಕೆಂದು ಸಮಿತಿ ಆಗ್ರಹಿಸಿದೆ.