Thursday, 11th August 2022

ಕೊಲೆ ಪ್ರಕರಣ ಆರೋಪಿಗಳಿಗೆ ಮರಣದಂಡನೆಯಂತಹ ಶಿಕ್ಷೆ ವಿಧಿಸಿ

ವಿಜಯಪುರ: ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶ್ರೀಶೈಲ ಜಗದ್ಗುರು ಪಂಡಿತಸಿದ್ದರಾಮ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೇಯ ಕೃತ್ಯ, ಇದನ್ನು ಎಲ್ಲರೂ ಖಂಡಿಸಲೇಬೇಕು, ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು, ಇವರಿಗೆ ನೀಡುವ ಶಿಕ್ಷೆಯ ಪರಿಣಾಮ ಬೇರೆಯವರು, ಇಂತಹ ಕೃತ್ಯ ಮಾಡಲು ಹೆದರಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ದೇಶದ ಪ್ರಧಾನಿಗಳಿಗೆ ಕೊಲೆ ಬೆದರಿಕೆ ವಿಯಷಯಕ್ಕೆ ಪ್ರತಿಕ್ರಿಯಿಸಿದ ಶ್ರೀಶೈಲ ಜಗದ್ಗುರು ಗಳು, ನಮ್ಮ ಪ್ರಧಾನಿಗಳ ಭದ್ರತೆ ಅತ್ಯಂತ ಸುಭದ್ರವಾಗಿದೆ. ಅವರೂ ಅತ್ಯಂತ ಸುರಕ್ಷಿತ ರಾಗಿದ್ದಾರೆ, ಇಂತಹ ಮಾತಿಗೆ ಕಿವಿಗೊಡಬಾರದು, ಪ್ರಧಾನಿಗಳನ್ನು ಕೊಲೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಿದರು.

ಇದೇವೇಳೆ ಮೀಸಲಾತಿ ಕುರಿತಂತೆ ಮಾತನಾಡಿದ ಸ್ವಾಮೀಜಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವವರೆಗೂ, ಮೀಸಲಾತಿ ಹೋರಾಟಗಳು ಇರುತ್ತವೆ. ಸರಕಾರದಿಂದ ದೊರೆ ಯುತ್ತಿರುವ ಸೌಲಭ್ಯಗಳನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು, ಅದಕ್ಕಾಗಿ ಮೀಸ ಲಾತಿ ಬೇಕಾಗುತ್ತದೆ. ಮೀಸಲಾತಿಗಾಗಿ ಹೋರಾಟ ಮಾಡುವುದು ಹೊಸದೇನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಶೈಲ ಕ್ಷೇತ್ರದಲ್ಲಿ ಕರ್ನಾಟಕ ಭಕ್ತರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿದ ಪೂಜ್ಯರು, ಕಳೆದ ಬಾರಿಯ ಜಾತ್ರೆಯ ಸಮಯದಲ್ಲಿ ಹಲ್ಲೆಗೊಳಗಾದ ಭಕ್ತರ ಚಿಕಿತ್ಸೆಗಾಗಿ ಸರ್ಕಾರದಿಂದಲೇ ಆರ್ಥಿಕ ನೆರವು ನೀಡುವ ವ್ಯವಸ್ಥೆಯಾಗಿದೆ, ಕೆಲವೊಂದು ಸಣ್ಣಪುಟ್ಟ ಘಟನೆಗಳಿಂದ, ರಾಜ್ಯಗಳ ನಡುವೆ, ಭಾಷಾ ವಿಚರಗಳ ಸಮಸ್ಯೆ ಉಂಟಾಗುತ್ತಿದೆ, ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಹೇಳಿದರು.

ಮನಗೂಳಿ, ಗುಂಡಕನಾಳ ಸ್ವಾಮೀಜಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸ್ವಾಮೀಜಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.