Sunday, 14th August 2022

ವರಿಷ್ಠರ ಬಿಗಿ ಹಿಡಿತದಲ್ಲಿ ರಾಜ್ಯ ಬಿಜೆಪಿ

ವರ್ತಮಾನ

maapala@gmail.com

ಯಡಿಯೂರಪ್ಪ ಅವರ ನಾಯಕತ್ವದಲ್ಲಿ ದಕ್ಷಿಣ ಭಾರತದಲ್ಲಿ ಅಧಿಕಾರದ ಖಾತೆ ತೆರೆದ ಕರ್ನಾಟಕ ಇದೀಗ ವರಿಷ್ಠರ ಬಿಗಿ ಮುಷ್ಠಿಯಲ್ಲಿ
ಸಿಲುಕಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಸಂಘಟನೆ ದೃಷ್ಟಿಯಿಂದ ಒಳ್ಳೆಯದಲ್ಲ.

ಬಿಜೆಪಿ ರಾಷ್ಟ್ರೀಯ ನಾಯಕರು 2024ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಚುನಾವಣೆ ಎದುರಿಸಲು ಅಗತ್ಯ ವೇದಿಕೆ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ವಿಚಾರದಲ್ಲೂ ಪ್ರಾದೇಶಿಕ ಪಕ್ಷಗಳ ಸಹಾಯ ಕೇಳುವ ಮೂಲಕ ರಾಜಕೀಯವಾಗಿ ಯಾರೂ ಶಾಶ್ವತ ವಿರೋಽಗಳಲ್ಲ ಎಂದು ಹೇಳಿಕೊಂಡು ಅಂತಹ ಪಕ್ಷಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದರೂ ಆಘಾಡಿ ಸರಕಾರ ಉರುಳಿದ ಬಳಿಕ ಬಂಡಾಯ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರ ಹಿಂದೆಯೂ ಇರುವ ಮುಖ್ಯ ಕಾರಣ ಮುಂಬರುವ ಲೋಕಸಭೆ ಚುನಾವಣೆ. ಆದರೆ, 2023ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಬೇಕಾದ ಕರ್ನಾಟಕದಲ್ಲಿ ಬಿಜೆಪಿಯ ಸಿದ್ಧತೆ ಏನು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ. ಹೌದು, ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಕತ್ತಲಲ್ಲಿದೆ. ವರಿಷ್ಠರ ಬಿಗಿ ಮುಷ್ಠಿಯಲ್ಲಿ ಸಿಲುಕಿದೆ. ಅವರ ಅನುಮತಿ ಇಲ್ಲದೆ ಪಕ್ಷದಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡು ವಂತಿಲ್ಲ ಎಂಬ ಸ್ಥಿತಿ ಇದೆ. ಆದರೆ, ಇದುವರೆಗೂ ರಾಷ್ಟ್ರೀಯ ನಾಯಕರು ರಾಜ್ಯದ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಕನಿಷ್ಠ ಪಕ್ಷಕ್ಕೆ ಚುರುಕು ಮುಟ್ಟಿಸುವ ಕೆಲಸವೂ ಆಗುತ್ತಿಲ್ಲ ಎಂಬುದನ್ನು ರಾಜ್ಯ ಬಿಜೆಪಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೆ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಽ ಕಾರಕ್ಕೆ ಬರುವುದಿಲ್ಲ ಎಂಬುದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಖಚಿತವಾಗಿದೆಯೇ? ಹೀಗೊಂದು ಪ್ರಶ್ನೆ ರಾಜ್ಯದ ಬಹುತೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಏಕೆಂದರೆ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಬರುತ್ತದೆ ಎಂದಾದರೆ ಸುಮಾರು ಒಂದೂವರೆ ವರ್ಷದಿಂದಲೇ ಬಿಜೆಪಿ ತಳ ಮಟ್ಟ ದಿಂದ ಪಕ್ಷ ಸಂಘಟಿಸುವ ಕಾರ್ಯ, ಸಂಘಟನೆಯನ್ನು ಚುರುಕು ಗೊಳಿಸುವ ಕೆಲಸ ಮಾಡುತ್ತಿತ್ತು.

ಪಕ್ಷದ ನಾಯಕರು ರಾಜ್ಯಾದ್ಯಂತ ಓಡಾಡುತ್ತಾ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರನ್ನು ಹುರಿದುಂಬಿಸುತ್ತಿದ್ದರು. ಚುನಾವಣೆಗೆ ಆರು ತಿಂಗಳು ಇದೆ ಎನ್ನುವಾಗಲೇ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದವು. ೨೦೦೪ರ ನಂತರವಂತೂ ಬಿಜೆಪಿ ಚುನಾವಣಾ ಸಿದ್ಧತೆ ಪೂರ್ಣ ಗೊಂಡ ಮೇಲೆ ಇತರೆ ಪಕ್ಷಗಳು ಅಖಾಡಾಕ್ಕೆ ಇಳಿಯುತ್ತಿದ್ದವು. ಆದರೆ, ಈ ಬಾರಿ ಮಾತ್ರ ಅಂತಹ ಉತ್ಸಾಹ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಪಕ್ಷದ ರಾಜ್ಯ ನಾಯಕರು ಎಲ್ಲಕ್ಕೂ ಪಕ್ಷದ ವರಿಷ್ಠರತ್ತ ಬೆರಳು ತೋರಿಸಿ ಸುಮ್ಮನಾಗುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಎಷ್ಟು ಬಲವಾಗಿತ್ತೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಬಿಜೆಪಿಯಲ್ಲೀಗ ವರಿಷ್ಠರು ಶಕ್ತಿಯುತವಾಗಿದ್ದಾರೆ. ಇದರ ಪರಿಣಾಮ ರಾಜ್ಯ ಬಿಜೆಪಿಯಲ್ಲಿ ಏನಾಗಬೇಕು ಎಂಬ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ರಾಜ್ಯ ನಾಯಕರಿಲ್ಲ.

ವರಿಷ್ಠರಿಗೇ ಸೆಡ್ಡು ಹೊಡೆಯುತ್ತಿದ್ದ ಬಿ.ಎಸ್.ಯಡಿಯೂರಪ್ಪ ಕೂಡ ತಣ್ಣಗಾಗಿದ್ದಾರೆ. 2021ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಇನ್ನು ಮುಂದೆ ರಾಜ್ಯ ಪ್ರವಾಸ ಮಾಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ಅದುವರೆಗೆ ವಿಶ್ರಮಿಸುವುದಿಲ್ಲ ಎಂದು ಘೋಷಣೆ ಮಾಡಿದ್ದ ಯಡಿಯೂರಪ್ಪ ಇನ್ನೂ ರಾಜ್ಯ ಪ್ರವಾಸ ಆರಂಭಿಸಿಯೇ ಇಲ್ಲ. ಅದಕ್ಕೆ ಬಿಜೆಪಿ  ಅವಕಾಶ ವನ್ನೂ ನೀಡಿಲ್ಲ. ಯಡಿಯೂರಪ್ಪ ಅಧಿಕಾರ ಕಳೆದಕೊಂಡ ಬಳಿಕ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರ ಪುತ್ರ ಬಿ.ವೈ.ವಿಜಯೇಂದ್ರ ಕೂಡ ಇತ್ತೀಚೆಗೆ ಸುಮ್ಮನಾಗಿದ್ದಾರೆ.

ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬುದು ನಾಳೆ ಬಾ ಎಂಬ ಕಥೆಯಂತಾಗಿದೆ. ಇದರಿಂದಾಗಿ ಸಚಿವಾ ಕಾಂಕ್ಷಿಗಳಿಗೆ ನಿರಾಶೆಯಾಗುವುದರ ಜತೆಗೆ ಬಹಳಷ್ಟು ಶಾಸಕರು ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಪಕ್ಷ ಸಂಘಟನೆ ಕುರಿತು ಯೋಚಿಸುತ್ತಲೂ ಇಲ್ಲ. 2021ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಂಪುಟ ರಚನೆ ಮಾಡಿದರಾದರೂ ನಾಲ್ಕು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದರು. ಅದನ್ನು ಭರ್ತಿ ಮಾಡುವುದು ಮತ್ತು ಸಂಪುಟ ಪುನಾರಚನೆ ಕುರಿತಂತೆ ಕಳೆದ ವರ್ಷದ ನವೆಂಬರ್ ನಿಂದ ಸತತ ಪ್ರಯತ್ನ ನಡೆಯುತ್ತಿದೆಯಾದರೂ ವರಿಷ್ಠರಿಂದ ಅನುಮತಿ ಸಿಕ್ಕಿಲ್ಲ. ಬಹುಷಃ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸಂಪುಟ ಪುನಾರಚನೆ ಕುರಿತು ಪ್ರಯತ್ನ ಆರಂಭವಾದರೂ ಇಷ್ಟೊಂದು ಸಮಯ ಅದು ಕೈ ಗೂಡದೇ ಇರುವುದು ಇದೇ ಪ್ರಥಮ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕೈದು ಬಾರಿ ದೆಹಲಿಗೆ ಹೋಗಿ ಬರಿಗೈಲಿ ವಾಪಸಾಗಿದ್ದಾರೆ.

ಇದರೊಂದಿಗೆ ನಿಗಮ- ಮಂಡಳಿಗಳ ನೇಮಕಾತಿ ಪ್ರಕ್ರಿಯೆಯೂ ನನೆಗುದಿಗೆ ಬಿದ್ದಿದೆ. ಇದಕ್ಕೆ ರಾಜ್ಯ ಬಿಜೆಪಿ ಮತ್ತು ಸರಕಾರ ಸಿದ್ಧವಿದೆ
ಯಾದರೂ ವರಿಷ್ಠರು ಮಾತ್ರ ಹಸಿರುನಿಶಾನೆ ತೋರುತ್ತಿಲ್ಲ. ಮತ್ತೊಂದೆಡೆ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಪರಿವರ್ತನೆ ಮಾಡುವ ಬಗ್ಗೆಯೂ ವರಿಷ್ಠರು ಇನ್ನೂ ನಿರ್ಧಾರ ಕೈಗೊಳ್ಳುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡ ಬೇಕು. ಪದಾಧಿಕಾರಿಗಳ ಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಹಲವು ತಿಂಗಳುಗಳಿಂದ ಇದೆ. ಇದಕ್ಕೂ ವರಿಷ್ಠರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಆ ಬಗ್ಗೆ ನೇರವಾಗಿ ಪ್ರಶ್ನಿಸುವ ಧೈರ್ಯವನ್ನೂ ರಾಜ್ಯ ನಾಯಕರು ತೋರುತ್ತಿಲ್ಲ.
ಎಲ್ಲಾದರೂ ಪ್ರಶ್ನಿಸಿ ವರಿಷ್ಠರ ಕೆಂಗಣ್ಣಿಗೆ ಗುರಿಯಾದರೆ ಎಂಬ ಭಯದಲ್ಲೇ ಎಲ್ಲಾ ನಾಯಕರೂ ಇದ್ದಾರೆ.

ಏಕೆಂದರೆ, ಬಿಜೆಪಿಯಲ್ಲಿ ಇಂತಹ ನಿರ್ಧಾರಗಳನ್ನು ಅಮಿತ್ ಶಾ ಒಬ್ಬರೇ ತೆಗೆದುಕೊಳ್ಳುತ್ತಾರೆ. ಅದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸುತ್ತಾರೆ. ಈ ಮೂವರನ್ನು ಹೊರತುಪಡಿಸಿ ಬೇರೆ ಯಾರಿಗೂ ಪಕ್ಷದಲ್ಲಿ ಏನಾಗುತ್ತಿದೆ ಮತ್ತು ಏನಾಗಬಹುದು ಎಂಬುದು ಗೊತ್ತಾಗುವುದಿಲ್ಲ. ಆದರೆ, ಅವರು ಮೂವರೂ ರಾಜ್ಯದ ವಿಚಾರದಲ್ಲಿ ಮೌನವಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಕೂಗು ಜೋರಾದಾಗಲೆಲ್ಲಾ, ಅದನ್ನೆಲ್ಲಾ ನಾವು ನೋಡಿ ಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರನ್ನೂ ಬಾಯಿ ಮುಚ್ಚಿಸುತ್ತಾರೆ.

ಇದರ ಪರಿಣಾಮ ಸರಿಸುಮಾರು ಒಂದು ವರ್ಷದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಬಿದ್ದಿವೆ. ಬಿಜೆಪಿಯಲ್ಲಿ ವರಿಷ್ಠರ ಶಕ್ತಿ ಹೆಚ್ಚಾಗಿದ್ದರಿಂದ ರಾಜ್ಯ ನಾಯಕತ್ವದ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಇದರ ಪರಿಣಾಮ ರಾಜ್ಯ ನಾಯಕರು ಮೆತ್ತಗಾಗಿದ್ದರೆ, ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಹಿಂದುತ್ವದ ವಿಚಾರ ಬಿಟ್ಟರೆ ಪಕ್ಷಕ್ಕೆ ಬೇರೇನೂ ವಿಷಯವೇ ಇಲ್ಲದಂತಾಗಿದೆ. ತಳ ಮಟ್ಟದಲ್ಲಿ ಮತದಾರರನ್ನು ತಲುಪುವ ಕೆಲಸ ಆಗುತ್ತಿಲ್ಲ. ಇಷ್ಟರಲ್ಲಾಗಲೇ ಒಂದು ಸುತ್ತು ಮನೆ ಮನೆಗೆ ಭೇಟಿ ಕೆಲಸ ಮುಗಿಸುತ್ತಿದ್ದ ಕಾರ್ಯಕರ್ತರು ಇನ್ನೂ ಆ ಕೆಲಸ ಆರಂಭಿಸಿಯೇ ಇಲ್ಲ.

ಬಿಜೆಪಿ ಕಾರ್ಯಕರ್ತರ ಈ ನಿರುತ್ಸಾಹವನ್ನು ಲಾಭವಾಗಿ ಪರಿವರ್ತಿಸಿಕೊಳ್ಳುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಆಕ್ರಮಣಕಾರಿ ಯಾಗಿಯೇ ಮುನ್ನುಗ್ಗುತ್ತಿದ್ದಾರೆ. ಇದು ಬಿಜೆಪಿಯವರ ನಿರುತ್ಸಾಹವನ್ನು ಮತ್ತಷ್ಟು ತಣ್ಣಗೆ ಮಾಡುತ್ತಿದೆ. ಕೇವಲ ನರೇಂದ್ರ ಮೋದಿ ಹೆಸರು ಅಥವಾ ಕೇಂದ್ರ ಸರಕಾರದ ಸಾಧನೆಗಳೊಂದಿಗೆ ಅಧಿಕಾರಕ್ಕೆ ಬರಬಹುದು ಎಂಬ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಏಕೆಂದರೆ, ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ವಿಫಲವಾಗಿರುವ ಉದಾಹರಣೆ ಸಾಕಷ್ಟಿದೆ. ಏಕೆಂದರೆ, ಉತ್ತರ ಭಾರತದ ರಾಜಕೀಯಕ್ಕೂ ಕರ್ನಾಟಕದ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಮೇಲಾಗಿ ರಾಜ್ಯದಲ್ಲಿ ಕಾಂಗ್ರೆಸ್ ಈಗಲೂ ಬಲಿಷ್ಠವಾಗಿದೆ. ಬಿಜೆಪಿ ಸ್ವಲ್ಪ ಎಚ್ಚರ ತಪ್ಪಿದರೂ ಅಽಕಾರ ಕಳೆದುಕೊಳ್ಳಬೇಕಾಗುತ್ತದೆ.
ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಽಕಾರಕ್ಕೆ ಬಂದಿತ್ತಾದರೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪಗಳಿಂದ ಕಳೆದುಕೊಳ್ಳಬೇಕಾಗಿ ಬಂದಿತ್ತು. ಮತ್ತೆ ಅಂತಹ ಪ್ರಸಂಗ ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ವರಿಷ್ಠರು ಎಲ್ಲವನ್ನೂ ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿದ್ದು ಒಂದು ಲೆಕ್ಕದಲ್ಲಿ ಒಳ್ಳೆಯ ನಿರ್ಧಾರವಾದರೂ ರಾಜಕೀಯವಾಗಿ ಪಕ್ಷವನ್ನು ಇದು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಬಿಗಿ ಪಟ್ಟು ಸ್ಥಳೀಯ ಮುಖಂಡರ ಉತ್ಸಾಹವನ್ನು ಕೂಡ ಕಡಿಮೆ ಮಾಡಿದ್ದು, ಕಾರ್ಯಕರ್ತರೂ ಮೆತ್ತಗಾಗಿದ್ದಾರೆ. ಅದರಲ್ಲೂ ಬಿ.ಎಸ್.ಯಡಿಯೂರಪ್ಪ ಅವರಂಥ ‘ಮಾಸ್ ಲೀಡರ್’ ಕುರಿತಾಗಿ ನಿರ್ಲಕ್ಷ್ಯ ತೋರುತ್ತಿರುವುದು, ಅವರ ಕುಟುಂಬವನ್ನು ಮೂಲೆಗುಂಪು ಮಾಡುವುದು ನಿಜಕ್ಕೂ ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.

ಲಾಸ್ಟ್ ಸಿಪ್: ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು. ಇಲ್ಲದಿದ್ದರೆ ಎಣ್ಣೆ ಬಂದಾಗ ಕಣ್ಣುಮುಚ್ಚಿ ಕೊಂಡಂತಾಗಬಹುದು.