Friday, 8th November 2024

ಕಾಮೇಗೌಡರಿಗೆ ಕೆ ಎಸ್ ಆರ್ ಟಿ ಸಿಯಿಂದ  ಉಚಿತ ಬಸ್ ಪಾಸ್

ಬೆಂಗಳೂರು: 
‘ಕೆರೆಗಳ ಮನುಷ್ಯ’ ಎಂದೇ ಖ್ಯಾತರಾಗಿರುವ ಕಾಮೇಗೌಡ ಅವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ, ‘ಜೀವಿತಾವಧಿಯವರೆಗೂ’ ಸಂಚರಿಸಲು ಉಚಿತ ಬಸ್ ಪಾಸ್ ನೀಡಲಾಗಿದೆ.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಉಚಿತ ಬಸ್ ಪಾಸ್ ನೀಡಲಾಗಿದ್ದು, ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಪಾಸ್ ನೀಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ ಕಾಮೇಗೌಡ ಅವರು ಉಚಿತವಾಗಿ ಸಂಚರಿಸಬಹುದಾಗಿದೆ.
 ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಅನನ್ಯ ಪರಿಸರ ಕಾಳಜಿಯನ್ನು ಮತ್ತು ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಕಾರ್ಯಕ್ರಮದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಡಿಯೋ ಕರೆ ಮಾಡಿ ಕಾಮೇಗೌಡರನ್ನು ಮಾತನಾಡಿದ್ದರು.
ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಕಾಮೇಗೌಡರು ಸಾಮಾಜಿಕ ಕಳಕಳಿಯನ್ನು ತೋರಿದ್ದರು. ಯಾವುದೇ ಆಕಾಂಕ್ಷೆ ಇಲ್ಲದೇ 16 ಕೆರೆಗಳನ್ನು ನಿರ್ಮಿಸಿದ್ದ ಕಾಮೇಗೌಡರು ಉಸಿತ ಬಸ್ ಪಾಸ್ ಮಾತ್ರ ಕೇಳಿದ್ದರು. ಬಸ್ ಪಾಸ್ ಸಿಕ್ಕರೇ ಅಕ್ಕಪಕ್ಕದ ಜಿಲ್ಲೆಗಳ ದೇವಾಲಯಗಳಿಗೆ ಭೇಟಿ ನೀಡಬಹುದು ಎಂಬುವುದು ಅವರ ಚಿಂತನೆಯಾಗಿತ್ತು. ಸದ್ಯ ಅವರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದ್ದು, ಈ ಕುರಿತ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಕಾಮೇಗೌಡರ ಕೊಡುಗೆ ಅಪಾರ, ಅದ್ಭುತ ಹಾಗೂ ಅನುಕರಣೀಯವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ, ಅವರ ಜೀವತಾವಧಿಯವರೆಗೆ ಉಚಿತವಾಗಿ ಸಂಚರಿಸಲು ಬಸ್ ಪಾಸನ್ನು ನೀಡಲು ಅನುಮತಿಸಲಾಗಿದೆ ಎಂದು ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.