Sunday, 13th October 2024

ಕೋವಿಡ್-19 ಆಸ್ಪತ್ರೆಯಿಂದ ಗುಣಮುಖರಾದ ಇಬ್ಬರ ಬಿಡುಗಡೆ

ಇನ್ನುಳಿದ 6 ಜನರ ಆರೋಗ್ಯವೂ ಸುಧಾರಣೆಯತ್ತ

ಬಳ್ಳಾರಿ:
ಕೊರೋನಾ ಸೊಂಕಿತ‌ ಜಿಲ್ಲೆಯ ಮತ್ತಿಬ್ಬರು ಇಂದು ಗುಣಮುಖರಾದ ಹಿನ್ನಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಜಿಲ್ಲೆಯಲ್ಲಿ ಇದುವರೆಗೆ 13 ಜನ ಸೋಂಕಿತರಾಗಿದ್ದರು. ಅವರಲ್ಲಿ ಈ ಮೊದಲು ಗುಣಮುಖರಾದ ಪಿ-89,ಪಿ-91 ಮತ್ತು ಪಿ-141 ನಂತರ ಪಿ-90 & ಪಿ-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇನ್ನಿಬ್ಬರನ್ನು 21 ವರ್ಷ ವಯಸ್ಸಿನ ಪಿ-333 & 24 ವರ್ಷದ ಪಿ- 337 ಅವರನ್ನು ಗುಣಮುಖರಾದ ಹಿನ್ನೆಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಇವರಿಬ್ಬರೂ ಸಹ ಹೊಸಪೇಟೆ ನಗರಕ್ಕೆ ಸೇರಿದವರಾಗಿದ್ದು, ಈ ಮುಂಚೆ ಬಿಡುಗಡೆಯಾದ ಜಿಲ್ಲೆಯ ಮೊದಲ ಸೊಂಕಿತ ಮಕ್ಕಳಾಗಿದ್ದಾರೆ ಹಾಗೂ ಅವರ ಪ್ರಥಮ ಸಂಪರ್ಕಿತರಾಗಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ ನೀಡಿ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿ,ಚಿಕಿತ್ಸೆ ನೀಡಿದೇವು, ಅವರು‌ ಇಂದು ಗುಣಮುಖರಾಗಿ ಹೊರಬಂದಿದ್ದಾರೆ ಎಂದರು.

ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದ ಅವರು, ಈ ಆರ್‍ಆರ್‍ಟಿ ತಂಡಗಳು ಗುಣಮುಖರಾಗಿರುವ ಈ ಜನರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಗುಣಮುಖರಾಗಿ ಹೊರಬಂದ ಪಿ-333 & ಪಿ- 337 ಅವರು ಆಸ್ಪತ್ರೆಗೆ ದಾಖಲಾಗಿ‌ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು & ಸ್ಥೈರ್ಯ ಜನನ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು
ಮತ್ತು ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಋಣವನ್ನು‌ ನಾವೆಂದು ಮರೆಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ, ಡಾ. ಅನಿಲ್, ಡಾ. ಲಿಂಗರಾಜು, ಡಾ. ವಿಜಯ ಶಂಕರ್, ಡಾ. ಸುನೀಲ್, ಡಾ.ವಿನಯ್, ಡಾ. ಸುಜಾತಾ, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ. ಚಿತ್ರಶೇಖರ್, ಡಾ. ಉಮಾ‌ಮಹೇಶ್ವರಿ‌‌ ಸೇರಿ ವೈದ್ಯಕೀಯ ಸಿಬ್ಬಂದಿ ಇದ್ದರು.