Sunday, 10th November 2024

ಜನರನ್ನು ಮಾನಸಿಕ ಖಿನ್ನತೆಗೆ ದೂಡುತ್ತಿದೆ ಕರೋನಾ !

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಕರೋನಾ ವ್ಯಾಪಕಗೊಳ್ಳುತ್ತಿರು ವುದರಿಂದ  ಭಯಭೀತಿಗೊಂಡಿರುವ  ಜನ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಕರೋನಾ ಆತಂಕದಿಂದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಬ್ಬೆಟ್ಟು ಎಂಬಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 55 ವರ್ಷದ ಸದಾಶಿವ ಶೆಟ್ಟಿ ನೇಣಿಗೆ ಶರಣಾಗುವ ಮುನ್ನ ಕರೋನಾ ಭಯ ಹುಟ್ಟಿಸಿದೆ ಎಂದು ಪತ್ರ ಬರೆದಿಟ್ಟಿದ್ದಾರೆ. ಇತ್ತೀಚಿಗೆ ಉಡುಪಿಯ ಬಹ್ಮಾವರದ ಉಪ್ಪೂರಿ ಗೋಪಾಲಕೃಷ್ಣ ಮಡಿವಾಳ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಕಡೆ ಎಸ್ ಆರ್ ಟಿಸಿ ಬಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಮಡಿವಾಳ, ಕರೋನಾ ಸುದ್ದಿಗಳ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ ಬಳಿಕ ಇನ್ನು ಮೂರ್ನಾಲ್ಕು ದಿನಗಳಿಗೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಇಷ್ಟು ದಿನಗಳ ಕಾಲ ಸಂಗ್ರಹ ಮಾಡಿದ್ದ ವಸ್ತುಗಳು ಖಾಲಿಯಾಗುತ್ತ ಬಂದ ಬಳಿಕ ಮತ್ತೊಂದು ರೀತಿಯ ಸಂಕಷ್ಟಗಳು ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಖಿನ್ನತೆಯಿಂದ ಹೊರ ಬರುವ ಮಾರ್ಗಗಳನ್ನು ಜನರೇ ಆಯ್ಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕರೋನಾ ವೈರಸ್ ಗೆ ಅಥವಾ ಕೇಂದ್ರ, ರಾಜ್ಯ ಸರಕಾರಕ್ಕೆ ಶಾಪ ಹಾಕುತ್ತ ಕುಳಿತರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಆದರೂ ನಮ್ಮ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಇರುವ ಏಕೈಕ ಕಾರಣದಿಂದ ಎಲ್ಲವನ್ನೂ ಅನುಭವಿಸುವ ಅನಿವಾರ್ಯತೆಯೂ ಇದೆ.
 ಖಿನ್ನತೆಯಿಂದ ಹೊರ ಬರಲು ಏನು ಮಾಡಬೇಕು ಎನ್ನುವ ಬಗ್ಗೆ ಇಂದೇ ನಿರ್ಧಾರ ಮಾಡಿ. ಒಬ್ಬರೇ ಕುಳೀತು ಕರೋನಾ ಬಗ್ಗೆ ಯೋಚನೆ ಮಾಡಿದರೆ ಖಿನ್ನತೆ ಕಟ್ಟಿಟ್ಟ ಬುತ್ತಿ. ನ್ಯೂಸ್ ಚಾನಲ್‌ ಗಳನ್ನು ನೋಡಿದರೆ ಬದುಕುವುದೇ ಬೇಡ ಎನಿಸುತ್ತದೆ. ವಾಟ್ಸಪ್, ಫೇಸ್ಬುಕ್ ಕೂಡ ನಿಮ್ಮನ್ನು ಬದುಕಿಸುವ ಸಾಧ್ಯತೆ ಕಡಿಮೆ. ಎಲ್ಲೆಲ್ಲೂ ಭಯಹುಟ್ಟಿಸುವ ವರದಿಗಳೇ ಬರುತ್ತಿವೆ. ಹಾಗಾಗಿ ಮೊಬೈಲ್ ಹಾಗೂ ಸಿನಿಮಾಗಳು, ಮನರಂಜನೆ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಎಲ್ಲದರಿಂದಲೂ ಆದಷ್ಟು ಅಂತರ ಕಾಯ್ದುಕೊಳ್ಳಬೇಕು.
ಖಿನ್ನತೆಗೆ ಒಳಗಾಗಾಬೇಡಿ, ದುಡುಕಿನ ನಿರ್ಧಾರಗಳು ಬೇಡವೇ ಬೇಡ. ಸಾಧ್ಯವಾದಷ್ಟು ಕರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ. ನೀವು ಉಳ್ಳವರಾಗಿದ್ದರೆ, ಅನ್ನದ ಪೊಟ್ಟಣಗಳನ್ನು ಮಾಡಿಕೊಂಡು ಬೀದಿಯಲ್ಲಿ ಬಿದ್ದಿರುವ ನಿರ್ಗತಿಕರಿಗೆ ಕೊಟ್ಟು ಬನ್ನಿ. ʼಸೋಶಿಯಲ್ ಡಿಸ್ಟೆನ್ಸ್ʼ ಕಾಯ್ದುಕೊಂಡು ರಸ್ತೆಯಲ್ಲಿ ನಿಂತಿರುವ ಪೊಲೀಸರಿಗೂ ಆಹಾರ ಕೊಡಿ. ಉಳಿದ ಸಮಯದಲ್ಲಿ ಮನೆ ಮಂದಿಯೆಲ್ಲಾ ಕುಳಿತು ಆಟವಾಡಿ. ಎಲ್ಲರೂ ಸೇರಿಕೊಂಡು ಅಡುಗೆ ಮಾಡಿ. ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಿ. ಕರೋನಾ ಎಂಬ ಮಹಾಮಾರಿ ಬಂದಿದ್ದರಿಂದ ನಾನು ಪುಸ್ತಕ ಪ್ರೇಮಿಯಾದೆ ಎಂದಾದರೂ ಹೇಳಿಕೊಳ್ಳಬಹುದು. ಹೆಚ್ಚು ಜನರು ಸೇರುವ ಪ್ರದೇಶಕ್ಕೆ ಹೋಗದೆ, ಮನೆಯಲ್ಲೇ ಕುಳಿತು ಖಿನ್ನತೆಗೂ ಒಳಗಾಗದೆ, ನಿಮ್ಮ ವ್ಯಾಪ್ತಿಯಲ್ಲಿ ಏನೇನು ಮಾಡಬಹುದು ಎನ್ನುವುದನ್ನು ಒಮ್ಮೆ ಲಿಸ್ಟ್ ಮಾಡಿಕೊಳ್ಳಿ. ಅದರಲ್ಲಿ ಸಾಧ್ಯವಾಗಿದ್ದನ್ನು ಮಾಡುತ್ತಾ ಸಾಗಿ. ಮನಸ್ಸಿಗೂ ಖುಷಿ ಆಗುವಂತೆ ಮಾಡಿ. ಖಿನ್ನತೆಯನ್ನು ಓಡಿಸಿ, ಕರೋನಾ ತೊಲಗಿಸಿ. ಎಲ್ಲರೂ ಬದುಕಿದರೆ ನಾವು ಬದುಕೋಣ, ಇಲ್ಲದಿದ್ದರೆ ಬೇಡ ಎನ್ನುವ ದೃಢ ನಿರ್ಧಾರ ಕೈಗೊಳ್ಳಿ. ಕರೋನಾ ಬಗ್ಗೆ ಭಯ ಬೇಕಿಲ್ಲ.
………….
 *ಬಾಕ್ಸ್* ….
 *ಸಾಮಾಜಿಕ ಅಂತರ ಸೋಂಕು ನಿಯಂತ್ರಣಕ್ಕೆ ರಹದಾರಿ*
ಜನರನ್ನು ಸಾವಿನ ಕುಣಿಕೆಯಿಂದ ಪಾರು ಮಾಡಲು ಅಗತ್ಯ ಇರುವ ʼಸೋಶಿಯಲ್ ಡಿಸ್ಟೆನ್ಸ್ʼ ಮಾಡುವ ಏಕೈಕ ಉದ್ದೇಶದಿಂದ ಕೇಂದ್ರ ಸರಕಾರ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದೆ. ʼಮನೆಯಲ್ಲೇ ಇರಿ ಜೀವ ಉಳಿಸಿಕೊಳ್ಳಿʼ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಆದರೆ ಮನೆಯಲ್ಲಿ ಮಾನಸಿಕ ಕ್ಷೋಭೆಗೆ ತುತ್ತಾಗುತ್ತಿರುವ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿಕೊಳ್ತಿದ್ದಾರೆ. ಮಹಾರಾಷ್ಟ್ರದ ಕಾಂದಿವಳಿಯಲ್ಲಿ ತಮ್ಮ ಮಾತು ಕೇಳದೆ ಮನೆಯಿಂದ ಹೊರಕ್ಕೆ ಹೋಗಿದ್ದ ಎನ್ನುವ ಏಕೈಕ ಕಾರಣಕ್ಕೆ ಶುರುವಾದ ಜಗಳ ಹತ್ಯೆಯಲ್ಲಿ ಅಂತ್ಯವಾಗಿದೆ. 28 ವರ್ಷದ ದುರ್ಗೇಶ್ ಠಾಕೂರ್ ಎಂಬಾತನನ್ನು ರಾಜೇಶ್ ಠಾಕೂರ್ ಎಂಬಾತ ಹತ್ಯೆ ಮಾಡಿದ್ದಾನೆ. ಕಾಂದಿವಳಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಲಾಕ್‌ಡೌನ್ಆದೇಶ ಉಲ್ಲಂಘನೆ ಮಾಡಿ ಪದೇ ಪದೇ ಮನೆಯಿಂದ ಹೊರಕ್ಕೆ ಹೋಗಿ ಬರುತ್ತಿದ್ದ. ಅದೇ ಕಾರಣಕ್ಕೆ ಜಗಳ ನಡೀತು. ಅತಿರೇಕಕ್ಕೆ ಹೋದಾಗ ಕರೋನಾ ಭಯದಲ್ಲಿ ಹತ್ಯೆ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ.