Friday, 8th November 2024

ತರಾತುರಿಯಲ್ಲಿ ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಟೆಂಡರ್  

 -ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್ ವಿಭಾಗಕ್ಕೆ ವರ್ಗಾವಣೆ
 -ಅವ್ಯವಹಾರ ಬಗ್ಗೆ ಕಣ್ಮುಚ್ಚಿ  ಕುಳಿತ ಸರಕಾರ
ವಿಶ್ವವಾಣಿ ವಿಶೇಷ
ಬೆಂಗಳೂರು:
 ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್‌ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್‌ಡಬ್ಲ್ಯುಎಸ್) ಮತ್ತಷ್ಟು ಕರ್ಮಕಾಂಡ ಮುಂದುವರಿದಿದೆ.
ಕೋವಿಡ್19 ಇರುವ ಸಂದರ್ಭದಲ್ಲಿ ಕೋವಿಡ್‌ಗೆ ಸಂಬಂಧವಿಲ್ಲದ ಅಲ್ಪಾವದಿ ಟೆಂಡರ್‌ನ್ನು  ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್ ವಿಭಾಗಕ್ಕೆ ವರ್ಗಾಯಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಕಮಿಷನ್ ಆಸೆಗಾಗಿ ಅಧಿಕಾರಿಗಳು ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಹೊರಟಿರುವ ಆರೋಪ ವ್ಯಕವಾಗಿದ್ದು, ಇದಕ್ಕೆ ಪೂರಕವಾಗಿ ಕೆಲ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿದೆ.
ಅಕ್ರಮವೇನು?
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆ (ಕೆಟಿಟಿಪಿ ಕಾಯ್ದೆ) ಅನ್ವಯ 2 ಕೋಟಿ ರು.ಗಿಂತ ಅಧಿಕ ಮೌಲ್ಯದ ಟೆಂಡರ್‌ಗೆ 60 ದಿನಗಳ ಕಾಲಾವಕಾಶ ನೀಡಬೇಕಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಅಲ್ಪಾವದಿ ಟೆಂಡರ್ ಆಹ್ವಾನಿಸಿಬೇಕಾದರೆ ಸರಕಾರದಿಂದ ವಿಶೇಷ ಅನುಮೋದನೆ ಪಡೆದು ನಡೆಸಬೇಕಿದೆ. ಆದರೆ, ಕೋವಿಡ್ ಆರಂಭವಾಗಿದನಿಂದ ಈಗಿನವರೆಗೂ   ಬರೀ ಹಗರಣಗಳಲ್ಲಿ ಮುಳುಗಿರುವ  ಕೆಡಿಎಲ್‌ಡಬ್ಲ್ಯುಎಸ್ ನಡೆಸಬೇಕಿರುವ 10 ಕೋಟಿ ರೂ.ಮೌಲ್ಯದ ಟೆಂಡರ್‌ನ್ನು ತರಾತುರಿಯಲ್ಲಿ ಆರೋಗ್ಯ ಇಲಾಖೆಯ ಮುಖ್ಯ ಇಂಜಿನಿಯರ್ ವಿಭಾಗಕ್ಕೆ  ವರ್ಗಾಯಿಸಲಾಗಿದೆ. ಆದರೆ, ಅಂತಿಮವಾಗಿ ಟೆಂಡರ್ ಪಡೆದ ಸಂಸ್ಥೆ ಅಥವಾ ವ್ಯಕ್ತಿಗೆ ಕಾರ್ಯ ಸಂಪೂರ್ಣಗೊಳಿಸಿದ ಮೇಲೆ ಈ ಕೆಡಿಎಲ್‌ಡಬ್ಲ್ಯುಎಸ್ ಅಧಿಕಾರಿಗಳೇ ಕಾರ್ಯ ಸಂಬಂಧ ಪ್ರಮಾಣ ಪತ್ರ ನೀಡಬೇಕಿದೆ.  ಹೀಗಾಗಿ, ಹಣ ಲೂಟಿ ಮಾಡಲು ಹೊರಟಿರುವ  ಆರೋಗ್ಯ ಇಲಾಖೆ ಇಂಜಿನಿಯರ್ ವಿಭಾಗ ಅಧಿಕಾರಿಗಳು ಹಾಗೂ ಕೆಡಿಎಲ್‌ಡಬ್ಲ್ಯುಎಸ್ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ರಂಗೋಲೆ ಕೆಳಗೆ ನುಸುಳುವ ಬುದ್ದಿ ತೋರಿದ್ದಾರೆ.
ಏನಿದು ಟೆಂಡರ್?
ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಕಳೆದ ಮೇ 18ರಂದು ಟೆಂಡರ್ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಸಂಬಂಧ ಮೆಡಿಕಲ್ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಕಾರ್ಯವನ್ನು ಕಾರ್ಯಕ್ಷಮತೆ ಹೊದಿರುವ ನುರಿತ ಕೆಲಸಗಾರರಿಂದ ಮಾಡಿಸಬೇಕಿದೆ. ಗ್ಯಾಸ್ ಪೈಪ್ ಲೈನ್‌ನಲ್ಲಿ ಸರಾಗವಾಗಿ ಗ್ಯಾಸ್ ಸರಬರಾಜು ಆಗಲು ವೆಲ್ಡಿಂಗ್, ಪ್ರೆಸರ್ ಟೆಸ್ಟಿಂಗ್, ಡಿಸ್ಟ್ರಿಬ್ಯೂಷನ್ ವಾಲ್ಸ್, ಕಂಟ್ರೋಲ್ ವಾಲ್ಸ್ ಮತ್ತಿತರರ ಸಾಮಗ್ರಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು. ಈ ಕುರಿತು ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕನಿಷ್ಠ 45ರಿಂದ 60 ದಿನಗಳ ಕಾಲಾವಧಿ ಬೇಕಾಗುತ್ತದೆ. ಅಲ್ಲದೆ, ಕೋವಿಡ್19ರ ಲಾಕ್‌ಡೌನ್ ಸಂದರ್ಭದಲ್ಲಿ ನುರಿತ ಕೆಲಸಗಾರರು ತಮ್ಮ ಊರಿಗೆ ತೆರಳಿರುವುದರಿಂದ ನಿಗದಿತ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಲು ಇನ್ನೂ ಸಮಯಬೇಕಾಗುತ್ತದೆ.  ಆದರೆ, ಅಂದಾಜು 10 ಕೋಟಿ ರು. ಮೌಲ್ಯದ ಈ ಟೆಂಡರ್‌ಗೆ ಆರೋಗ್ಯಕರ ಸ್ಪರ್ದೆ ಇಲ್ಲದಂತೆ ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ತಮಗಿಷ್ಟ ಬಂದವರಿಗೆ ಅಂದರೆ ಲೋಕೋಪಯೋಗಿ ಇಲಾಖೆ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ನೀಡಲು ಸದ್ದಿಲ್ಲದೆ ಸಿದ್ಧತೆಗಳು ನಡೆದಿವೆ.  ಈ ಟೆಂಡರ್ ನಡೆಸಲು ತುರ್ತು ಅವಕಶ್ಯತೆ ಇರುವುದಿಲ್ಲ. ಕೋವಿಡ್ ಮುಗಿದ ಮೇಲೆ ಟೆಂಡರ್ ಕರೆಯಬಹುದಾಗಿದೆ. ಆದರೆ, ಹಣ ಲೂಟಿ ಮಾಡಲು ಅಧಿಕಾರಿಗಳು ತರಾತುರಿಯಲ್ಲಿ ಟೆಂಡರ್ ಕರೆದಿರುವುದು ವಿಪರ‌್ಯಾಸ.
ಕಣ್ಮುಚ್ಚಿ  ಕುಳಿತ ಆರೋಗ್ಯ ಇಲಾಖೆ
ಕೆಡಿಎಲ್‌ಡಬ್ಲ್ಯುಎಸ್‌ನಲ್ಲಿ  ಕೋವಿಡ್ ಆರಂಭವಾಗಿದನಿಂದ ಈಗಿನವರೆಗೆ ಕಳಪೆ ಪಿಪಿಇ ಕಿಟ್, ದುಪ್ಪಟ್ಟು ಬೆಲೆಗೆ ಸ್ಯಾನಿಟೈಸರ್ ಖರೀದಿ, ಕಪ್ಪುಪಟ್ಟಿಗೆ ಸೇರಿದ ಕಂಪನಿಗೆ ಟೆಂಡರ್ ನೀಡಿಕೆ, ಹಳೆಯ ವೆಂಟಿಲೇಟರ್ ಖರೀದಿ ಹಾಗೂ ಕಡಿಮೆ ಬೆಲೆಗೆ ಡಯಾಲಿಸಿಸ್ ಯಂತ್ರಗಳ ಮಾರಾಟ ಮತ್ತಿತರರ ಹಗರಣಗಳು ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದೆ ಆರೋಗ್ಯ ಇಲಾಖೆ ಮೀನಾಮೇಷ ಎಣಿಸುತ್ತಿದೆ.
ಭ್ರಷ್ಟ ಅಧಿಕಾರಿಗಳ ಶೀಘ್ರ ಕ್ರಮಕೈಗೊಳ್ಳಿ
ಕೆಡಿಎಲ್‌ಡಬ್ಲ್ಯುಎಸ್‌ನಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಅಲ್ಲದೆ, ಸರಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವ ಭ್ರಷ್ಟ ಅಧಿಕಾರಿಗಳು ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಅವರಿಂದಲೇ ನಷ್ಟವಾಗಿರುವ ಮೊತ್ತವನ್ನು ವಸೂಲಿ ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಡ ಹೆಚ್ಚಾಗುತ್ತಿದೆ.
ಭ್ರಷ್ಟ ಅಧಿಕಾರಿಗಳ ವರ್ಗಾವಣೆ ಮಾಡದೆ ಹುದ್ದೆ ನೀಡಿದ ಇಲಾಖೆ
ಅವ್ಯವಹಾರ ಸಂಬಂಧ ಇಬ್ಬರ ಮಹಿಳಾ ವೈದ್ಯಾಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆಗೊಳಿಸಲು ಈಗಾಗಲೇ ಸಚಿವರು ವರ್ಗಾವಣೆಗೆ ಪತ್ರಕ್ಕೆ ಸಹಿ ಹಾಕಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ‌್ಯದರ್ಶಿಯವರಿಗೆ ಕಳಿಹಿಸಲಾಗಿದೆ. ಅದರೆ, ಎಸಿಎಸ್‌ಯವರು ಭ್ರಷ್ಟ ಮಹಿಳಾ ವೈದ್ಯಾಧಿಕಾರಿಗಳ ವರ್ಗಾವಣೆ ಪತ್ರಕ್ಕೆ ಸಹಿ ಹಾಕಿ ಆದೇಶ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಸತ್ತ ಹೆಣದ ಮೇಲೆ ಹಣ ಲೂಟಿ ಮಾಡಿರುವ  ಭ್ರಷ್ಟ ಅಧಿಕಾರಿಗಳ  ಬಗ್ಗೆ ಸರಕಾರಕ್ಕೆ ಇಂಚಿಂಚೂ ಮಾಹಿತಿ ಇದ್ದರೂ ಅವರ ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ? ಎಂಬುದು ಪ್ರಶ್ನೆ ಮೂಡಿದೆ.