Sunday, 1st December 2024

ಮಣ್ಣಿನ ಮಕ್ಕಳು ಎಂದು ಕರೆದುಕೊಂಡಿದ್ದು ನಾವಲ್ಲ, ಜನರು

ರಾಮನಗರ: 

ಕೊರೋನಾ ಎಫೆಕ್ಟ್​ ನಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾನೇ ಮುಖ್ಯಮಂತ್ರಿ ಆಗಿದ್ರೆ ಇವತ್ತು 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ನಾವು ಕೊಟ್ಟ ಸಲಹೆಯನ್ನ ಪರಿಗಣಿಸುತ್ತಿಲ್ಲ. ರೈತರ ವಿಚಾರದಲ್ಲಿ ಯಾರು ಟೀಕೆ ಮಾಡಬೇಡಿ. ನಾನು ರೈತರ ಕಷ್ಟದಲ್ಲಿ ನೆರವಿಗೆ ಬಂದು ಹಲವರಿಗೆ ಸಹಾಯ ಮಾಡಿದ್ದೇನೆ ಎಂದರು.

ಮಣ್ಣಿನ ಮಕ್ಕಳು ಮನೆಯಲ್ಲಿ ಮಲಗಲ್ಲ : 

ರಾಮನಗರ ಜೈಲಿಗೆ ಪಾದರಾಯನಪುರದ ವಿಚಾರಣಾಧೀನ ಖೈದಿಗಳು ಶಿಫ್ಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ನಾನು ಈ ಬಗ್ಗೆ ಸಿಎಂ, ಗೃಹಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಈ ನಿರ್ಧಾರ ಮಾಡಿದ್ದೀರಿ, ಈ ಸಲಹೆ ಕೊಟ್ಟವರು ಯಾರು ಜನ ನನಗೆ ಫೋನ್ ಮಾಡಿ ಈ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಹೇಳಿದ್ದೇನೆ. ಬೆಂಗಳೂರಿನಲ್ಲೇ ಸರ್ಕಾರಿ ಹಾಸ್ಟೆಲ್ ನಲ್ಲಿ, ಆಸ್ಪತ್ರೆಗಳಲ್ಲಿ, ಕಲ್ಯಾಣಮಂಟಪದಲ್ಲಿ ಇರಿಸಬಹುದಿತ್ತು. ಸಿಎಂ ಹಾಗೂ ಗೃಹಮಂತ್ರಿಗಳಿಗೆ ಉದ್ಧಟತನ, ಅಧಿಕಾರದಲ್ಲಿದ್ರೆ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ನಾನು ಸಾರ್ವಜನಿಕರಿಗೆ ಅನಾನುಕೂಲವಾಗಲು ಅವಕಾಶ ಕೊಡಲ್ಲ. ಸರ್ಕಾರದ ಹಲವು ಲೋಪಗಳಿವೆ ಆದರೂ ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.

ನನ್ನ ಕುಟುಂಬದ ಮದುವೆ ಮಾಡಲು ಹೋದಾಗ ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದರು. ರಾಮನಗರ ಗ್ರೀನ್ ಜೋನ್ ನಲ್ಲಿದೆ. ಕುಮಾರಸ್ವಾಮಿ ಬೆಂಗಳೂರಿನಿಂದ ಜನರನ್ನ ಕರೆತಂದು ರೆಡ್ ಜೋನ್ ಗೆ ತರುತ್ತಿದ್ದಾರೆಂದಿದ್ದರು. ಆದರೆ, ಈಗ ಆ ಪುಣ್ಯಾತ್ಮರು ಎಲ್ಲಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಸರ್ಕಾರದ ಆರೋಗ್ಯ ತಪಾಸಣಾ ಕಿಟ್ ನಲ್ಲಿ ಲೋಪದೋಷ ವಿಚಾರ ಈ ಬಗ್ಗೆ ಸಿಎಂ ರವರು ಸರ್ವಪಕ್ಷ ಸಭೆ ಕರೆದಾಗಲೇ ಎಚ್ಚರಿಕೆ ಕೊಟ್ಟಿದ್ದೆ. ನೀವು ತರಿಸುತ್ತಿರುವ ಕಿಟ್ ಗಳು ಕಳಪೆ ಗುಣಮಟ್ಟದವು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ಕೊಟ್ಟಿದ್ದೆ. ಈಗ ಕೇಂದ್ರ ಸರ್ಕಾರ ಅದರಲ್ಲಿ ಲೋಪವಿದೆ ಎರಡು ದಿನ ತಪಾಸಣೆ ನಿಲ್ಲಿಸಿ ಎಂದಿದ್ದಾರೆ. ಹಾಗಾಗಿ ಸರ್ಕಾರ ಯಾವುದೇ ಲೋಪಕ್ಕೆ ಅವಕಾಶ ಕೊಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.