Sunday, 1st December 2024

ಲಾಕ್‌ಡೌನ್‌ನಲ್ಲಿ ಪೊಲೀಸರ ಎಣ್ಣೆ ಕಿತಾಪತಿ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲಲಿರುಳೆನ್ನದೇ ಪೊಲೀಸರು ಕರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಮದ್ಯ ಸರಬರಾಜು ಮಾಡಲು ಹಣ ಪಡೆದುಕೊಂಡಿದ್ದಲ್ಲದೇ ಈಗ ತಮ್ಮ ಮಾನ ತಾವೆ ಹರಾಜು ಹಾಕಿಕೊಂಡಿರುವ ಘಟನೆ ನಡೆದು ನಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಎಲೆಕ್ಟ್ರಾಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸಾಗಾಟ ವಿಷಯಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ವಾಸು ಎಂಬುವವರ ನಡುವೆ ಜಗಳವಾಗಿದ್ದಲ್ಲದೇ ಒಬ್ಬರ ಮೇಲೋಬ್ಬರು ಹಣಪಡೆದಿರುವುದಾಗಿ ಆರೋಪಿಸಿಕೊಂಡು ತಮ್ಮ ಮರ್ಯಾದೆಯನ್ನು ತಾವೇ ಹರಾಜು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಒಂದು ಕಡೆ ಸ್ವಲ್ಪ ಯಾಮಾರಿದರೂ ಕರೋನಾ ಎಲ್ಲಿ ನಮಗೆ ತಗುಲುತ್ತದೇಯೋ ಎನ್ನುವ ‘ಭಯದಲ್ಲಿ ಪೊಲೀಸರು ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರ ಸಿಕ್ಕ ಅವಕಾಶದಲ್ಲೇ ಹಣ ಮಾಡಲು ನಿಂತಿರುವ ಆರೋಪ ಅವರಿಂದಲೇ ಬಯಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ವಾಸು ಅವರು ಏ.11 ರಂದು ಎಲೆಕ್ಟ್ರಾನಿಕ್ ಸಿಟಿಯ ಬಳಿ ಜಿ.ಎಸ್.ಟಿ ಜಾಗೃತ್ ವಾಹನ ತಡೆದು ತಪಾಸಣೆ ನಡೆಸಿದ್ದರು. ಅದರಲ್ಲಿ ಲಕ್ಷಾಂತರ ರು.ಮೌಲ್ಯದ ಲಿಕ್ಕರ್ ಸಿಕ್ಕಿತ್ತು. ಸರಕಾರಿ ವಾಹನದಲ್ಲಿ ಲಿಕ್ಕರ್ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಎಸಿಪಿ ವಾಸು ಹಾಗೂ ಸಿಬ್ಬಂದಿ, ವಿಶ್ವಾಸ್ ಗುಪ್ತಾ ಎನ್ನುವ ಆರೋಪಿ ಹಿಡಿದು ವಿಚಾರಣೆ ಮಾಡಿದ್ದಾರೆ. ಬಳಿಕ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದರು. ಈ ವಿಷಯ ತಿಳಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಎಸಿಪಿ ವಾಸು ಅವರಿಗೆ ಕರೆ ಮಾಡಿ ಆರೋಪಿ ಬಿಡುವಂತೆ ಹೇಳಿದ್ದಾರೆ. ಆದರೆ, ಎಸಿಪಿ ವಾಸು ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಕೋಪಗೊಂಡ ಮುರುಗನ್, ಆರೋಪಿಗಳ ಬಳಿ ಎಸಿಪಿ ವಾಸು 50 ಲಕ್ಷ ಹಣ ಕೇಳಿದ್ದಾರೆ ಎಂದು ಆರೋಪಿಸಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ವಾಸು ಮಾತ್ರ, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರೇ ಹಣ ಪಡೆದು ಆರೋಪಿಯನ್ನು ಬಿಡುವುದಕ್ಕೆ ಹೇಳಿದ್ದಾರೆ. ಆದರೆ, ಇದೀಗ ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ತಾವು ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಘಟನೆ ವಿವರ: ಏ.11 ರಂದು ರಾತ್ರಿ 9 ಗಂಟೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಕೆ.ಕಿಶೋರ್‌ಕುಮಾರ್ ಅವರು ಬೆಟ್ಟದಾಸನಪುರ ರಸ್ತೆಯ ಟಿವಿಎಸ್ ಶೋ ರೂಂ ಬಳಿ ಸರಕಾರಿ ವಾಹನ ಟಾಟಾ ಸುಮೋದ ಹಿಂಬಾಗದಲ್ಲಿ ಅಕ್ರಮವಾಗಿ ಮದ್ಯ ಸಾಗಾಣೆ ಮಾಡಲು ಮದ್ಯವನ್ನು ಸಂಗ್ರಹಿಸಿಕೊಂಡಿದ್ದರು. ಲಾಕ್‌ಡೌನ್ ಹಾಗೂ ನಗರದಲ್ಲಿ 144 ಸೆಕ್ಷನ್ ಜಾರಿ ಇರುವ ಹಿನ್ನೆಲೆಯಲ್ಲಿ ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ್ದರು.