Sunday, 13th October 2024

ವಲಸೆ ಕಾರ್ಮಿಕರ ಪ್ರಯಾಣದ ಖರ್ಚನ್ನು ಕಾಂಗ್ರೆಸ್ ಭರಿಸಲಿದೆ : ಸೋನಿಯಾ ಗಾಂಧಿ

ದೆಹಲಿ:

ಕರೋನಾ ಲಾಕ್ ಡೌನ್‌ನಿಂದಾಗಿ ಅತಂತ್ರರಾಗಿರುವ ಪ್ರತಿಯೊಬ್ಬ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ರೈಲು ಪ್ರಯಾಣ ಭತ್ಯೆಯನ್ನು ಕಾಂಗ್ರೆಸ್ ಭರಿಸಲಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸೋನಿಯಾ ಗಾಂಧಿ ಅವರು, ಲಾಕ್ ಡೌನ್‌ನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಹಸ್ರಾರು ವಲಸೆ ಕಾರ್ಮಿಕರು ಅವರು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಸಿಲುಕಿದ್ದಾರೆ. ಅವರು ತಮ್ಮ ಊರುಗಳಿಗೆ ತೆರಳಲು ತುಂಬಾ ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇಂಥ ಎಲ್ಲಾ ಕಾರ್ಮಿಕರಿಗೆ ತಮ್ಮ ಪಕ್ಷದ ಎಲ್ಲಾ ರಾಜ್ಯ ಘಟಕಗಳು ರೈಲು ಪ್ರಯಾಣ ಭತ್ಯೆಗಳನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ.

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ಉಚಿತ ಮತ್ತು ಸುರಕ್ಷಿತ ಸಾರಿಗೆ ವ್ಯವಸ್ಥೆ ಮಾಡಬೇಕೆಂಬ ಕಾಂಗ್ರೆಸ್ ಮನವಿಗೆ ಕೇಂದ್ರ ಸರಕಾರ ಮತ್ತು ಭಾರತೀಯ ರೈಲ್ವೆೆ ಸ್ಪಂದಿಸಿಲ್ಲ ಎಂದು ಸೋನಿಯಾ ಆರೋಪಿಸಿದ್ದಾರೆ.  ಇದೇ ಕಾರಣಕ್ಕಾಗಿ ದೇಶದ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳು ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದೆ ಎಂದು ಅಖಿಲ ಭಾರತ ಕಾಂಗ್ರೆೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರು ತಿಳಿಸಿದ್ದಾರೆ.

ವಿದೇಶಗಳಲ್ಲಿ ಲಾಕ್ ಡೌನ್‌ನಿಂದ  ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರಕಾರ ಸೂಕ್ತ ವ್ಯವಸ್ಥೆ ಮಾಡಿದೆ. ಆದರೆ ದೇಶದಲ್ಲಿನ ವಲಸೆ ಕಾರ್ಮಿಕರ ಹಿತಾಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಸೋನಿಯಾ ಆಪಾದಿಸಿದರು.

ಕಾಂಗ್ರೆಸ್ ಮುಖಂಡ ಮತ್ತು ಸಂಸದ ರಾಹುಲ್ ಗಾಂಧಿ ಕೂಡ ಟ್ವೀಟರ್‌ನಲ್ಲಿ ಕೇಂದ್ರ ಸರಕಾರ ಮತ್ತು ರೈಲ್ವೆ ವಿರುದ್ದ ಕಿಡಿ ಕಾರಿದ್ದಾರೆ.  ಒಂದೆಡೆ ವಿವಿಧ ರಾಜ್ಯಗಳಲ್ಲಿ ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಭಾರತೀಯ ರೈಲ್ವೆ ಟಿಕೆಟ್ ಹಣ ವಸೂಲಿ ಮಾಡುತ್ತಿದೆ. ಇನ್ನೊೊಂದೆಡೆ ಇದೇ ರೈಲ್ವೆ ಇಲಾಖೆ ಪ್ರಧಾನಮಂತ್ರಿ ಅವರ ಕೇರ್ಸ್ ನಿಧಿಗೆ 151 ಕೋಟಿ ರು.ಗಳನ್ನು ದೇಣಿಗೆ ನೀಡಿದೆ. ಈ ಒಗಟು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.