Sunday, 3rd November 2024

ಶಿಕ್ಷಕರ ನೋವಿಗೆ ಸರಕಾರ ಸ್ಪಂದಿಸಲಿ: ಎಚ್ಡಿಡಿ

ಬೆಂಗಳೂರು:
ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ 1300 ಕೋಟಿ ರೂ ಆರ್‌ಟಿಇ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿ 250 ಕೋಟಿ ರು. ಬಿಡುಗಡೆ ಮಾಡಿರುವ ರಾಜ್ಯ ಸರಕಾರವನ್ನು ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.
  ಆರ್.ಟಿ.ಇ ಬಾಕಿ ಬಿಡುಗಡೆ ಸೇರಿದಂತೆ ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.ಕೇಂದ್ರ ಸರಕಾರ ಮೇ 12 ರಂದು 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಅದರ ವಿವರಗಳು ದೊರೆತ ನಂತರ ಪೂರಕವಾಗಿ ಸಾಧ್ಯತೆಗಳನ್ನು ಪರಿಶೀಲಿಸಿ ರಾಜ್ಯ ಸರಕಾರ ಹೆಚ್ಚುವರಿ ನೆರವು ನೀಡಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದರು.
 ಕೇಂದ್ರ ಸರಕಾರ ಪ್ಯಾಕೇಜ್ ಘೋಷಣೆ ಮಾಡಿ ಈಗಾಗಲೇ ಒಂದು ತಿಂಗಳು ಉರುಳಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಿಲ್ಲ. ಶಿಕ್ಷಕರು ಮತ್ತು ಸಂಸ್ಥೆಗಳ ಆಡಳಿತ ಮಂಡಳಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿವೆ. ಶಿಕ್ಷಕರು ಮತ್ತು ಖಾಸಗಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಅಧ್ಯಕ್ಷ ಎ.ಪಿ. ರಂಗನಾಥ್ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ನನಗೆ ಅನೇಕ ಬಾರಿ ಮನವಿ ಸಲ್ಲಿಸಿ ದುಸ್ಥಿತಿ ಕುರಿತು ಸರಕಾರಕ್ಕೆ ಒತ್ತಡ ಹೇರುವಂತೆ ತಮ್ಮನ್ನು ಒತ್ತಾಯಿಸಿದ್ದಾರೆ.
  ಖಾಸಗಿ ಶಾಲೆಗಳ ಶಿಕ್ಷಕರು ಬೋಧನೆ ಮಾಡುವುದನ್ನು ಬಿಟ್ಟು ಬೇರೆ ವೃತ್ತಿಗಳಲ್ಲಿ ನಿರತರಾಗುತ್ತಿರುವುದು ನೋವಿನ ಸಂಗತಿ. ಹೀಗಾಗಿ ಆದಷ್ಟು ಬೇಗ ಶಿಕ್ಷಕರ ಸಮಸ್ಯೆ ಪರಿಹರಿಸುವಂತೆ ದೇವೇಗೌಡ ಆಗ್ರಹಿಸಿದ್ದಾರೆ.