Monday, 14th October 2024

ಹಾಸನ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಕರೋನಾ ಪ್ರಕರಣ ಪತ್ತೆ

ಹಾಸನ:

ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಲ್ಲಿ ಕೋವಿದ್ 19 ಪ್ರಕರಣ ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ ಮೂಲದಿಂದ ಜಿಲ್ಲೆಗೆ ವಲಸೆ ಬಂದಿರುವವರಲ್ಲೇ ಎರಡನೇ ದಿನವೂ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು ನಾಲ್ವರು ಸೋಂಕಿತರು ಒಂದೇ ಕುಟುಂಬದವರಾಗಿದ್ದು, 14 ವರ್ಷ ಮತ್ತು 17 ವರ್ಷದ ಇಬ್ಬರೂ ಮಕ್ಕಳು ಸಹ ಸೇರಿದ್ದಾರೆ. ಅವರನ್ನು ಹಾಸನದ ಕೊವೀಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದರು.

ಸೋಂಕಿತರು ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳಕ್ಕೆ ಸೇರಿದವರಾಗಿದ್ದು, ಮೇ.12 ರಂದು ಮಧ್ಯಾಹ್ನ ಹಾಸನ ಜಿಲ್ಲೆಗೆ ಖಾಸಗಿ ವಾಹನದಲ್ಲಿ ಆಗಮಿಸಿದ್ದಾರೆ. ನಂತರ ನೇರವಾಗಿ ಕೊವೀಡ್-19 ತಪಾಸಣಾ ಕೇಂದ್ರಕ್ಕೆ ತೆರಳಿ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದಾರೆ. ಹಾಗಾಗಿ ಅವರೆಲ್ಲ ತಮ್ಮ ಊರು ಸೇರಿದಂತೆ ಜಿಲ್ಲೆಯ ಬೇರೆ ಯಾವುದೇ ಸ್ಥಳಕ್ಕೆ ಪ್ರಯಾಣ ಮಾಡಿಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮೇ.12 ರಂದು ಜಿಲ್ಲೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದ 5 ಜನ ಸೋಂಕಿತರ ಜತೆಗೆ ಆ ಸ್ಥಳದಲ್ಲೇ ಕ್ವಾರಂಟೈನ್ ಇದ್ದು, ನಿಕಟ ಸಂಪರ್ಕಹೊಂದಿದ್ದ, 57 ಜನರನ್ನೂ ಜಿಲ್ಲೆಯ ಕೊವೀಡ್-19 ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್ ಗೆ ಸೇರ್ಪಡೆ ಮಾಡಲಾಗಿದೆ ಎಂದು ಆರ್ ಗಿರೀಶ್ ಅವರು ಮಾಹಿತಿ ನೀಡಿದರು.