Saturday, 14th December 2024

ಅಪಘಾತದಲ್ಲಿ ಗಾಯಗೊಂಡಿದ್ದ ಪೇದೆ ಸಾವು

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು:

ಜಪ್ತಿ ಮಾಡಿದ ಆಟೋ ಚಾಲನೆ ಮಾಡಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪೀಣ್ಯ ಪೊಲೀಸ್ ಠಾಣೆ ಮುಖ್ಯಪೇದೆ ನಾಗೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗಿರಿವನಹಳ್ಳಿಯ ನಾಗೇಶ್ ಮೃತಪಟ್ಟವರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸಪ್ತಗಿರಿ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಹುಟ್ಟುರಿಗೆ ಕಳಿಸಿಕೊಡಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಪೀಣ್ಯ ದಾಸರಹಳ್ಳಿ ಜಂಕ್ಷನ್ ಬಳಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಆಟೋವನ್ನು ಮುಖ್ಯಪೇದೆ ನಾಗೇಶ್ ಅವರು ಜಫ್ತಿ ಮಾಡಿಕೊಂಡು ಹೋಗುವಾಗ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ಬಳಿಕ ನಾಗೇಶ್‌ಗೆ ಲಘು ಹೃದಯಾಘಾತವಾಗಿತ್ತು. ಪೊಲೀಸರು ಹಾಗೂ ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು. ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಆಸ್ಪತ್ರೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ‘ಧೈರ್ಯ ತುಂಬಿದ್ದರು. ಆದರೆ, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ 4ಗಂಟೆಗೆ ಮೃತಪಟ್ಟಿದ್ದಾರೆ.