Saturday, 14th December 2024

ಎಲ್ಲ‌ ಜಿಲ್ಲಾಸ್ಪತ್ರೆಗಳಲ್ಲಿ 25 ವೆಂಟಿಲೇಟರ್ ವ್ಯವಸ್ಥೆ

 

*ರಾಮನಗರ*:

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 25 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ನಿರ್ಮಿಸಿರುವ ಕೊವಿಡ್‌-19 ರೆಫೆರಲ್ ಆಸ್ಪತ್ರೆಗೆ ಭೇಟಿ ನೀಡಿ, ಕೊವಿಡ್‌ ನಿಯಂತ್ರಣಕ್ಕೆ ರಾಮನಗರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ವೆಂಟಿಲೇಟರ್‌ ಹಾಗೂ ಪರ್ಸನಲ್‌ ಪ್ರೊಟೆಕ್ಟೀವ್‌ ಎಕ್ವಿಪ್ಮೆಂಟ್‌ ಕಿಟ್‌ಗಳ ಕೊರತೆ ಆಗದಂತೆ ಎಚ್ಚರವಹಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ 25 ವೆಂಟಿಲೇಟರ್‌ ವ್ಯವಸ್ಥೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದು,”ಎಂದು ಅವರು ತಿಳಿಸಿದರು.

ಕೊವಿಡ್-19 ಸೋಂಕು ನಿಯಂತ್ರಣ ಸಂಬಂಧ ರಾಮನಗರ ಜಿಲ್ಲಾಡಳಿತ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಅದೃಷ್ಟವಷಾತ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಆದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೆ ಮುಂಜಾಗ್ರತೆ ವಹಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಸೋಂಕಿನ ಶಂಕೆ ಮೇರೆಗೆ 8 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ,” ಎಂದರು.

*ವರ್ಷದ ಕೊನೆಗೆ ಹೊಸ ಆಸ್ಪತ್ರೆ*
“ಜಿಲ್ಲೆಯಲ್ಲಿ 100 ಹಾಸಿಗೆಯ ಆಸ್ಪತ್ರೆ ಇದ್ದು, ಹೆಚ್ಚುವರಿಯಾಗಿ 100 ಹಾಸಿಗೆಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು. 40 ಆಕ್ಸಿಜನ್‌ ಬೆಡ್‌, 4 ವೆಂಟಿಲೇಟರ್ ವ್ಯವಸ್ಥೆ ಇದೆ. ಹೊಸ ಜಿಲ್ಲಾ ಆಸ್ಪತ್ರೆ ಕಟ್ಟಡ ಅಪೂರ್ಣವಾಗಿದ್ದು, ಆದಷ್ಟು ಬೇಗ ಕೆಲಸ ಮುಗಿಸುವಂತೆ ಮುಖ್ಯ ಎಂಜನಿಯರ್‌ಗೆ ಸೂಚಿಸಲಾಗಿದೆ. ವರ್ಷದ ಕೊನೆಗೆ ಹೊಸ ಜಿಲ್ಲಾ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುವುದು,”ಎಂದು ಮಾಹಿತಿ ನೀಡಿದರು.

*ಎಪಿಎಂಸಿಯಲ್ಲಿ ಮಾವು ಮಂಡಿ*
“ಎಪಿಎಂಸಿಗಳಲ್ಲಿ ಮಾವು ಮಂಡಿಗಳನ್ನು ತೆರೆಯಲು ತೀರ್ಮಾನ ಆಗಿದೆ. ಜಿಲ್ಲೆಯಲ್ಲೇ ಮೂರು ಮಾವು ಮಾರುಕಟ್ಟೆ ತೆರೆಯಲಾಗುವುದು. ಖಾಸಗಿಯವರು ಸಹ ಮಾರುಕಟ್ಟೆ ಮಾಡಲು ಮುಂದೆ ಬಂದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಲಾಗುತ್ತದೆ. ಜತೆಗೆ, ಸಾಗಣೆಗೂ ವ್ಯವಸ್ಥೆ ಕಲ್ಪಿಸಿ, ಮಾವು ಬೆಳೆಗಾರರಿಗೆ ಒಳ್ಳೆಯ ದರ ಸಿಗುವ ಹಾಗೆ ಮಾಡುವುದು ನಮ್ಮ ಉದ್ದೇಶ,”ಎಂದು ತಿಳಿಸಿದರು.

*ಕಾರ್ಮಿಕರಿಗೆ ಊಟ/ಪಡಿತರ*
*ಈವರೆಗೆ ಸುಮಾರು 5000 ಕೂಲಿ ಕಾರ್ಮಿಕರಿಗೆ ಪಡಿತರ ಒದಗಿಸಲಾಗಿದೆ, 2000 ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಶ್ರಮಿಕವರ್ಗವರು, ಅಸಹಾಯಕರು ಸೇರಿದಂತೆ ಯಾರೂ ಖಾಲಿ ಹೊಟ್ಟೆಯಲ್ಲಿ ಇರಬಾರದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದಾನಿಗಳು, ಸರ್ಕಾರದ ಕಡೆಯಿಂದಲೂ ಪಡಿತರ ವಿತರಣೆ ವ್ಯವಸ್ಥೆ ಆಗಿದೆ,”ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

*ಮಾಸ್ಕ್‌ ಕಲ್ಚರ್‌ ಇರಲಿ*
“ಮುಂಜಾಗ್ರತಾ ಕ್ರಮವಾಗಿ ಹೊರಗೆ ಓಡಾಡುವಾಗ ಮಾಸ್ಕ್‌ ಧರಿಸುವುದು ಉತ್ತಮ. ಗಾರ್ಮೆಂಟ್ಸ್‌ಗಳಲ್ಲಿ ಮಾಸ್ಕ್‌ ಸಿದ್ಧವಾಗಬೇಕು, ಬಟ್ಟೆಯ ಮಾಸ್ಕ್ ಪುನರ್‌ ಬಳಕೆಗೆ ಯೋಗ್ಯವಾಗಿರುತ್ತವೆ,”ಎಂದು ಹೇಳಿದರು.