Friday, 13th December 2024

ಕನ್ನಡ ಪತ್ರಿಕೆಗಳಿಗೆ ಇಪ್ಪತ್ತು ವರ್ಷ, ಕರೋನಾಕ್ಕೆ ಇಪ್ಪತ್ತು ದಿನ !

ವಿಶ್ವೇಶ್ವರ ಭಟ್

ಮೊನ್ನೆ ‘ಔಟ್ಲುಕ್’ ವಾರಪತ್ರಿಕೆ ಮಾಜಿ ಸಂಪಾದಕರೂ,ಆತ್ಮೀಯ ಸ್ನೇಹಿತರೂ ಆದ ಕೃಷ್ಣಪ್ರಸಾದ ಅವರು ಕನ್ನಡ ಪತ್ರಿಕೋದ್ಯಮದ ಸ್ಥಿತಿ-ಗತಿ ಬಗ್ಗೆ ಮಾತಾಡಲು (ಪೊಡ್ ಕಾಸ್ಟ್ ) ಕರೆದಿದ್ದರು. ಸುಮಾರು ನಲವತ್ತು ನಿಮಿಷಗಳ ಕಾಲ ಕರೋನಾ ವೈರಸ್ಸಿನಿಂದಾಗಿ ಆಗಿರುವ ಲಾಕ್ ಡೌನ್, ಕನ್ನಡ ಪತ್ರಿಕೋದ್ಯಮದ ಮೇಲೆ ಎಂಥ ಗಂಭೀರ ಪರಿಣಾಮವನ್ನುಂಟು ಮಾಡಿದೆ ಎಂಬುದನ್ನು ಇಬ್ಬರೂ ಚರ್ಚಿಸಿದೆವು. ಲಾಕ್ ಡೌನ್ ಪ್ರತಿ ಉದ್ಯಮದ ಮೇಲೆ, ಪ್ರತಿ ವ್ಯಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡಿದೆ. ಚಿಂದಿ ಆಯುವವನಿಂದ, ಅಮೆರಿಕ ಅಧ್ಯಕ್ಷರವರೆಗೆ ಪ್ರತಿಯೊಬ್ಬರೂ ಇದರ ಕಹಿಯನ್ನು ಅನುಭವಿಸುತ್ತಿದ್ದಾರೆ.

ಹೀಗಿರುವಾಗ ಕನ್ನಡ ಪತ್ರಿಕೆಗಳು ಹೊರತಲ್ಲ. ಕೇವಲ ಪತ್ರಿಕೆಗಳೊಂದೇ ಅಲ್ಲ, ಟಿವಿ, ಸಿನಿಮಾ, ಮನರಂಜನೆ ಹೀಗೆ ಸಮಾಜದ ಪ್ರತಿಯೊಂದೂ ಸ್ಥರದ ಮೇಲೂ ಕರೋನಾ ಕರಿನೆರಳು ಚಾಚಿದೆ. ಈಗಾಗಲೇ ಹಲವು ಪತ್ರಿಕೆಗಳು ತಮ್ಮ ಮುದ್ರಣ ನಿಲ್ಲಿಸಿವೆ. ಲಾಕ್ ಡೌನ್ ಮುಗಿದು ಪರಿಸ್ಥಿತಿ ಸುಧಾರಿಸುವವರೆಗೆ ಪ್ರಿಂಟ್ ಆವೃತ್ತಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಹಲವು ಮಾಧ್ಯಮ ಸಂಸ್ಥೆಗಳು ಇ-ಪೇಪರ್ ಮತ್ತು ಆನ್ ಲೈನ್ ಆವೃತ್ತಿಗಳನ್ನು ಮಾತ್ರ ಇಟ್ಟುಕೊಳ್ಳಲು ನಿರ್ಧರಿಸಿವೆ. ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್ ನಂಥ ಬಲಾಢ್ಯ ಮಾಧ್ಯಮ ಸಂಸ್ಥೆಗಳು ಉದ್ಯೋಗಕ್ಕೆ ಸಂಚಕಾರ, ಸಂಬಳಕ್ಕೆ ಕತ್ತರಿ, ಭಡ್ತಿಗೆ ಬ್ರೇಕ್ ಪಾಲಸಿಯನ್ನು ಆರಂಭಿಸಿವೆ. ಇದರನ್ವಯ ಈಗಾಗಲೇ ಕೆಲವರನ್ನು ಮನೆಗೆ ಕಳಿಸಿವೆ. ಅಷ್ಟೇ ಅಲ್ಲ, ಮೂವತ್ತರಿಂದ ಐವತ್ತು ಪರ್ಸೆಂಟ್ ಸಂಬಳ ಕತ್ತರಿಸಲು ನಿರ್ಧರಿಸಿರುವುದಾಗಿ ಘೋಷಿಸಿವೆ. ಪತ್ರಕರ್ತರಿಗೆ ಕೆಲಸ ಉಳಿದರೆ ಸಾಕು ಎಂಬಂತಾಗಿದೆ.

ಪತ್ರಿಕೆಗಳಿಂದ ಕರೋನಾ ವೈರಸ್ಸು ಹರಡುತ್ತದೆ ಎಂಬ ಗಾಳಿಸುದ್ದಿ, ಸುಳ್ಳು ಸುದ್ದಿ ಹಬ್ಬುತ್ತಿದ್ದಂತೆ, ಜನ ಕಂಗಾಲಾಗಿ ಮನೆಗೆ ತರಿಸುತ್ತಿದ್ದ ಪತ್ರಿಕೆಗಳನ್ನು ಹಠಾತ್ತನೆ ನಿಲ್ಲಿಸಿದರು. ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ ಎಂದು ಎಲ್ಲಾ ಪತ್ರಿಕೆಗಳು ವೈಜ್ಞಾನಿಕ ವರದಿ, ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳನ್ನು ಉಲ್ಲೇಖಿಸಿದರೂ ಸಾರ್ವಜನಿಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಗಬೇಕಾದ ಹಾನಿ ಆಗಿಬಿಟ್ಟಿತ್ತು. ಲಾಕ್ ಡೌನ್ ಆರಂಭವಾಗುತ್ತಿದ್ದಂತೆ, ಪತ್ರಿಕೆಗಳಿಗೆ ಬರುತ್ತಿದ್ದ ಜಾಹೀರಾತುಗಳು ಏಕಾಏಕಿ ನಿಂತು ಹೋದವು. ಜಗತ್ತಿನಲ್ಲಿ ಉತ್ಪಾದನೆಯ ವೆಚ್ಚ (Cost of Production)ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ಪದಾರ್ಥವೆಂದರೆ ಪತ್ರಿಕೆಯೊಂದೇ.

ಅಂದರೆ ಹದಿನಾರು ಪುಟಗಳ ಪತ್ರಿಕೆಯನ್ನು ಓದುಗರ ಕೈಗಿಡಲು ಹನ್ನೆರಡರಿಂದ ಹದಿನಾಲ್ಕು ರುಪಾಯಿ ವೆಚ್ಚವಾಗುತ್ತದೆ. ಅದಕ್ಕೆ ಓದುಗರಿಂದ ಪಡೆಯುವುದು ಕೇವಲ ಐದು ರುಪಾಯಿ. ವಿತರಕರಿಗೆ ಕಮಿಷನ್ ಕೊಟ್ಟ ನಂತರ ಮಿಗುವುದು ಬರೀ ಮೂರು ರೂಪಾಯಿ. ಅಂದರೆ ಒಂದು ಪತ್ರಿಕೆ ಮಾರಾಟವಾದರೆ ಹತ್ತರಿಂದ ಹನ್ನೆರಡು ರುಪಾಯಿ ನಷ್ಟವಾಗುತ್ತದೆ. ಈ ನಷ್ಟವನ್ನು ಭರಿಸಿ, ಲಾಭ ಮಾಡಬೇಕೆಂದರೆ ಜಾಹೀರಾತೊಂದೇ ಮಾರ್ಗ. ಆ ಮೂಲವೇ ನಿಂತು ಹೋದರೆ, ಪತ್ರಿಕೆಯನ್ನು ಹೊರತರುವುದಾದರೂ ಹೇಗೆ ?

ಹೀಗಾಗಿ ಎಲ್ಲಾ ಪತ್ರಿಕೆಗಳು ತಮ್ಮ ಪತ್ರಿಕೆಯ ಮುದ್ರಿತ ಪ್ರತಿಗಳ ಸಂಖ್ಯೆ ಅಥವಾ ಪ್ರಸಾರ ಸಂಖ್ಯೆಯನ್ನು ಕಡಿಮೆ ಮಾಡಿದವು. ಪತ್ರಿಕೆಯ ಪುಟಗಳ ಸಂಖ್ಯೆಯನ್ನು ಕಡಿತಗೊಳಿಸಿದವು. ಪ್ರತಿದಿನ ನಲವತ್ತರಿಂದ ಅರವತ್ತು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್ ದಿಢೀರನೆ ಹನ್ನೆರಡು – ಹದಿನಾಲ್ಕು ಪುಟಗಳಿಗೆ ಇಳಿದು ಹೋದವು. ಈ ಎರಡು ಇಂಗ್ಲಿಷ್ ಪತ್ರಿಕೆಗಳಲ್ಲಿ ಆರಂಭದ ಹತ್ತು ಪುಟ ಜಾಹೀರಾತಿನ ನಂತರ ಸುದ್ದಿ ಪ್ರಕಟವಾಗುತ್ತಿತ್ತು. ಈಗ ಇಡೀ ಪತ್ರಿಕೆಯೇ ಹನ್ನೆರಡು ಅಥವಾ ಹದಿನಾಲ್ಕು ಪುಟ. ಅಷ್ಟಾಗಿಯೂ ಒಂದೂ ಜಾಹೀರಾತಿಲ್ಲ. ಇಡೀ ಪತ್ರಿಕೆಯೇ ಭಣಭಣ.

ಇಂಥ ಸಂದರ್ಭದಲ್ಲಿ ಪ್ರಸಾರ ಸಂಖ್ಯೆಯನ್ನು ಕಡಿತಗೊಳಿಸುವುದೊಂದೇ ದಾರಿ. ಈಗ ಓದುಗರು ತಮಗೆ ಪತ್ರಿಕೆ ನೀಡಿ ಎಂದು ಹೇಳಿದರೂ, ಜಾಹೀರಾತಿನ ಒಳಹರಿವು ಇಲ್ಲದಿರುವುದರಿಂದ, ಓದುಗರಿಗೆ ಪತ್ರಿಕೆ ನೀಡಲಾಗದ ಸಂದಿಗ್ಧ ಸ್ಥಿತಿ. ಇದೇ ಪ್ರಸಾರ ಸಂಖ್ಯೆಯನ್ನು ಇಟ್ಟುಕೊಳ್ಳಬೇಕೆಂದರೆ, ವಿಪರೀತ ನಷ್ಟವನ್ನು ಅನುಭವಿಸಬೇಕು. ಅದಕ್ಕಿಂತ ಮುಖ್ಯವಾಗಿ ಪರಿಸ್ಥಿತಿ ಯಾವಾಗ ಸುಧಾರಿಸುತ್ತದೆ, ಜಾಹೀರಾತು ಹರಿವು ಯಾವಾಗ ಸರಿ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾಳೆಯೇ ಲಾಕ್ ಡೌನ್ ತೆರವಾದರೂ, ಮಾರುಕಟ್ಟೆ ಕ್ರಿಯಾಶೀಲವಾಗಲು, ಜನರ ಮನಸ್ಥಿತಿ ಒಂದು ಹಂತಕ್ಕೆ ಬರಲು, ಕನಿಷ್ಠ ಆರು ತಿಂಗಳಾದರೂ ಬೇಕು. ಅದಾದ ನಂತರವೂ ಪರಿಸ್ಥಿತಿ ಸರಿ ಹೋಗಬಹುದು ಎಂಬ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ.

ಸರಕಾರಿ ಜಾಹೀರಾತುಗಳನ್ನೊಂದೇ ನಂಬಿದರೆ, ಅರ್ಧ ಹೊತ್ತು ಉಪವಾಸ. ಈ ಸಂಕಟ ಸ್ಥಿತಿಯಲ್ಲಿ ಸರಕಾರಿ ಜಾಹೀರಾತು ಸಹ ಕಡಿಮೆಯಾಗಿದೆ. ಸರಕಾರದ ಬೊಕ್ಕಸವೂ ಸೊರಗಲಾರಂಭಿಸಿದೆ. ಹನುಮಂತನೇ ಹಗ್ಗ ತಿನ್ನುತ್ತಿರುವಾಗ, ಪೂಜಾರಿ ಶಾವಿಗೆ ಬೇಕು ಎಂದು ಕೇಳಿದಂತಾದೀತು. ಈ ಎಲ್ಲಾ ಸಂಕಟಗಳಿಂದ ಪಾರಾಗಿ, ಪತ್ರಿಕೆಯ ಪ್ರಕಟಣೆಯನ್ನು ಉಳಿಸಿಕೊಳ್ಳಬೇಕೆಂದರೆ, ಪ್ರಸಾರ ಸಂಖ್ಯೆಯಲ್ಲಿ ಕಟ್, ಪುಟಗಳ ಸಂಖ್ಯೆಯಲ್ಲಿ ಕಟ್, ಉದ್ಯೋಗ ಕಟ್, ಸಂಬಳ ಕಟ್, ಪ್ರೊಮೋಷನ್ ಕಟ್, ಇನ್ನಿತರ ಸೌಲಭ್ಯ ಕಟ್, ವರ್ಕ್ ಫ್ರಾಮ್ ಹೋಮ್ … ಇವೇ ಮುಂತಾದ ಕಠಿಣ ಕ್ರಮಗಳನ್ನು ಕೈಗೊಳ್ಳದೇ ವಿಧಿಯಿಲ್ಲ.

ಮುದ್ರಣ ಮಾಧ್ಯಮ ತನ್ನ ಚರಿತ್ರೆಯಲ್ಲೇ ಇಂಥ ಸಂಕಟಮಯ ಸ್ಥಿತಿಯನ್ನು ಎದುರಿಸಿರಲಿಲ್ಲ. ವಿದೇಶಗಳಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಮತ್ತು ಕರ್ನಾಟಕಲ್ಲಿ ಪ್ರಸಾರ ಜಾಸ್ತಿಯಾಗುತ್ತಿದೆ. ಪ್ರತಿವರ್ಷ ಪತ್ರಿಕೆಗಳ ಪ್ರಸಾರ ಶೇ.ಎಂಟರಷ್ಟು ಜಾಸ್ತಿಯಾಗುತ್ತಿವೆ. ಇನ್ನೂ ಇಪ್ಪತ್ತು ವರ್ಷಗಳವರೆಗೆ (2040) ಪತ್ರಿಕೆಗಳಿಗೆ ಓದುಗರು ಕಡಿಮೆಯಾಗುವುದಿಲ್ಲ ಎಂದು ಅಂದಾಜು ಹಾಕಲಾಗಿದೆ. ಆದರೆ ಕಣ್ಣಿಗೆ ಕಾಣದ ಹುಳಾಪಾಟಿ ವೈರಸ್ ಪತ್ರಿಕೆಗಳ ಅಸ್ತಿತ್ವವನ್ನೇ ಅಲುಗಾಡಿಸಿರುವುದಂತೂ ನಿಜ.

ಇಪ್ಪತ್ತು ವರ್ಷಗಳ ಹಿಂದೆ, ಅಂದರೆ 2000ರಲ್ಲಿ, ಕನ್ನಡದ ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳ ಪ್ರಸಾರ ಸಂಖ್ಯೆ ಸೇರಿಸಿದರೆ ಐದು ಲಕ್ಷದಷ್ಟಾಗುತ್ತಿತ್ತು. ಆದಾದ ನಂತರ ವಿಜಯ ಕರ್ನಾಟಕ ಪತ್ರಿಕೆ ಬಂತು. ಆ ಪತ್ರಿಕೆ ಮಾಡಿದ -ಪವಾಡವೇನು ಎಂಬುದು ಎಲ್ಲರಿಗೂ ಗೊತ್ತಿದೆ. ಆನಂತರ ‘ವಿಜಯವಾಣಿ’, ‘ವಿಶ್ವವಾಣಿ’ ಪತ್ರಿಕೆಗಳು ಬಂದವು. ಈ ಮಧ್ಯೆ ಎಲ್ಲಾ ಪತ್ರಿಕೆಗಳ ಪ್ರಸಾರವೂ ಇಮ್ಮಡಿಯಾದವು. ಇದರ ಪರಿಣಾಮವಾಗಿ, ಈ ಇಪ್ಪತ್ತು ವರ್ಷಗಳಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ಇಪ್ಪತ್ತೈದು ಲಕ್ಷ ದಾಟಿದೆ.

ಆದರೆ ಕರೋನಾವೈರಸ್ ದುಪಳಿಯಿಂದ ಕಳೆದ ಇಪ್ಪತ್ತು ದಿನಗಳಲ್ಲಿ ಇಪ್ಪತ್ತು ಲಕ್ಷ ಪ್ರಸಾರ ಕಡಿಮೆಯಾಗಿದೆ. ‘ಕನ್ನಡ ಪತ್ರಿಕೆಗಳಿಗೆ ಇಪ್ಪತ್ತು ವರ್ಷ, ಕರೋನಾಕ್ಕೆ ಇಪ್ಪತ್ತು ದಿನ’ ಎಂಬಂತಾಗಿದೆ. ಅಂದರೆ ಇಪ್ಪತ್ತು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಕರೋನಾ ಇಪ್ಪತ್ತು ದಿನಗಳಲ್ಲಿ ಹಾಳುಗೆಡವಿದೆ. ಕನ್ನಡ ಪತ್ರಿಕೆಗಳು ಈ ಪ್ರಸಾರವನ್ನು ಪುನಃ ಪಡೆಯಬಹುದು. ಆದರೆ ಅದಕ್ಕೆ ಸ್ವಲ್ಪ ಬೇಕು. ಜಾಹೀರಾತು ಪ್ರಮಾಣ ಹೆಚ್ಚದೇ, ಪ್ರಸಾರ ಹೆಚ್ಚಿಸುವುದು ಸಾಧ್ಯವಿಲ್ಲದ ಮಾತು. ಜಾಹೀರಾತು ಹೆಚ್ಚಬೇಕೆಂದರೆ ತಳಹಿಡಿದ ಆರ್ಥಿಕತೆ ಚೇತರಿಸಿಕೊಳ್ಳಬೇಕು. ಈ ಮಾತು ಕನ್ನಡ ಪತ್ರಿಕೆಗಳಿಗೆ ಮಾತ್ರವಲ್ಲ, ಪ್ರತಿ ಉದ್ಯಮಕ್ಕೂ ಅನ್ವಯ. ಎಲ್ಲಾ ಉದ್ಯಮಗಳು ಕ್ರಿಯಾಶೀಲವಾಗಿ ಉತ್ತಮ ಸ್ಥಿತಿಗೆ ಬಂದಾಗ ಪತ್ರಿಕೆಗಳೂ ಲವಲವಿಕೆ ಪಡೆದುಕೊಳ್ಳಬಹುದು.

ಅಲ್ಲಿಯವರೆಗೆ ಎಲ್ಲವೂ ಮಬ್ಬು, ಎಲ್ಲರೂ ತಬ್ಬಿಬ್ಬು !