Wednesday, 11th December 2024

ಕರೋನಾ ತಡೆಗೆ ಸುಧಾಮೂರ್ತಿ ಸ್ಫೂರ್ತಿ ಮಾತೆ !

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದ ಜನತೆಯ ಆರೋಗ್ಯ, ಯೋಗಕ್ಷೇಮ ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ. ಆದರೆ ಸರಕಾರ ಸಂಕಷ್ಟಕ್ಕೆ (ಆರ್ಥಿಕ) ಸಿಲುಕಿದಾಗ, ರಾಜ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ನೊಂದ ಜೀವಗಳಿಗೆ ಆಸರೆಯಾಗುವವರು ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಸುಧಾಮೂರ್ತಿ ಅವರು. ಒಂದಲ್ಲ ಒಂದು ರೀತಿಯಾಗಿ ಸರಕಾರಕ್ಕೆ ಸಹಾಯಹಸ್ತ ಚಾಚುವ ಮೂಲಕ ರಾಜ್ಯದ ಹಿತ ಕಾಪಾಡುವಲ್ಲಿ ಇವರದ್ದು ಬಹುಪಾಲು.
ದೇಶವು ಕರೋನಾ ಸೋಂಕಿನ‌ ವಿರುದ್ಧ ಹೋರಾಡಲು ಹೆಣಗಾಡುತ್ತಿರುವ ಸಂದರ್ಭದಲ್ಲಿ  ವೈದ್ಯಕೀಯ ಸೌಲಭ್ಯ ಕಲ್ಪಿಸಲು ಟಾಟಾ, ಮಹೀಂದ್ರಾ ಸೇರಿದಂತೆ ಮುಂದಾದ ಕಂಪನಿಗಳ ದಿಗ್ಗಜರುಹಾಗೂ ಕೆಲ ಸಿನಿಮಾ ರಂಗದ ನಟರು ನೆರವಿಗೆ ಮುಂದಾಗಿದ್ದಾರೆ. ಸೋಂಕಿನ ವಿರುದ್ಧ ಹೋರಾಟದಲ್ಲಿ ಸರಕಾರ ಹಣ ಹೊಂದಿಸಲು ಕಷ್ಟವಾಗುತ್ತದೆ ‌ನಿಜ. ಆದರೆ ಹಣವಂತರು ಮನಸು ಮಾಡಿ ದೇಶದ ಪರಿಸ್ಥಿತಿ ಸುಧಾರಣೆಗೆ ತರಲು ಮುಂದೆ ಬಂದು, ಸ್ಪಂದಿಸಲೇ ಬೇಕಾದ ಸಮಯ ಇದಾಗಿದೆ. ಬಡಜನರ ಮೇಲಿನ ಕಾಳಜಿ ತೋರಿ ಕೈಲಾದಷ್ಟು ಸಹಾಯ ಮಾಡುವುದು ಅನಿವಾರ್ಯ. ಇಂತಹ ಸನ್ನಿವೇಶಗಳು ಆಕಸ್ಮಿಕವಾದರೂ ಸಹಾಯಹಸ್ತ ಚಾಚಲೇಬೇಕಾಗುತ್ತದೆ.
ಕರ್ನಾಟಕದಲ್ಲಿ  ಆಳುವ ಸರಕಾರಗಳಿಗೆ ಎದುರಾಗುವ ನೆರೆ, ಬರಗಾಲ, ಕ್ಷಾಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸದಾ ಮುಂದೆ ಬರುವವರು ಸುಧಾಮೂರ್ತಿ ಅವರು.     ರಾಜ್ಯ ಸಂಕಷ್ಟಕ್ಕೀಡಾದಗಲೆಲ್ಲಾ ಕರುನಾಡ ಮಹಾತಾಯಿ ಅಂತಲೇ ಕರೆಸಿಕೊಳ್ಳುವ ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕಿ ಸುಧಾಮೂರ್ತಿ ಅವರು ರಾಜ್ಯದಲ್ಲಿ ಕರೋನಾ ವೈರಸ್‌ ಗೆ ಮೊದಲ ಬಲಿ ಆದ ಸಂದರ್ಭದಲ್ಲಿಯೇ ರಾಜ್ಯ ಸಚಿವರಾದ ಸುರೇಶ್‌ ಕುಮಾರ್‌ ಅವರಿಗೆ ಫೋನಾಯಿಸಿ ಇದರ ವಿರುದ್ಧ ಜತೆಯಾಗಿ ಹೋರಾಡೋಣ, ಯಾವುದಾದರೊಂದು ಆಸ್ಪತ್ರೆಯನ್ನ ಕರೋನಾ ವೈರಸ್‌ಗಾಗಿ ಸೀಮಿತಗೊಳಿಸಿದರೆ ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಸುಧಾಮೂರ್ತಿ ಅವರು ಸಚಿವರಿಗೆ ಭರವಸೆ ನೀಡಿದ್ದರು. ಇದನ್ನ ಖುದ್ದು ಸಚಿವ ಸುರೇಶ್‌ ಕುಮಾರ್‌ ಅವರೇ ತನ್ನ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಇದೇ ಮಾತನ್ನು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಅವರಿಗೂ ತಿಳಿಸಿದ್ದರು. ಆದರೆ ದುರಂತ ಅಂದರೆ ಆರಂಭದಲ್ಲಿ ಎಚ್ಚೆದ್ದು, ಸರಕಾರಕ್ಕೆ ಸಲಹೆ ನೀಡಿದ್ದರು.
ಸುಧಾಮೂರ್ತಿ ಅವರ ಇನ್ಫೋಸಿಸ್‌ ಫೌಂಡೇಶನ್‌ ಈಗಲೂ ಸಹಾಯ ಹಸ್ತ ಚಾಚಲು ಸಿದ್ಧವಾಗಿ ನಿಂತಿದೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ತಾನೇ ಆಹಾರ ಪೊಟ್ಟಣ ಕಟ್ಟಿದ್ದು ಮಾತ್ರವಲ್ಲದೇ, ಹತ್ತು ಕೋಟಿ ರೂಪಾಯಿ ಪರಿಹಾರ ನೀಡಿ ಸರಕಾರ ಜತೆಗೆ ಬೆನ್ನೆಲುಬಾಗಿ ನಿಂತು ರಾಜ್ಯದಲ್ಲಿಯೇ ಮನೆಮಾತಾದವರು. ಇದೀಗ ಮತ್ತೆ ಸುಧಾ ಮೂರ್ತಿ ಅವರು ಕರೋನಾ ವಿರುದ್ಧ ಹೋರಾಟಕ್ಕೂ ಸರಕಾರದ ಜತೆ ಕೈ ಜೋಡಿಸಿದ್ದಾರೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾದ ವಸ್ತುಗಳನ್ನು ಇನ್ಫೋಸಿಸ್‌ ಫೌಂಡೇಶನ್‌ ಕಳುಹಿಸಿಕೊಟ್ಟಿದೆ. ಅದರಲ್ಲೂ ವಿಶೇಷವಾಗಿ 500 ಮಿಲಿ ಲೀಟರ್‌ ನ 5000 ಬಾಟಲ್‌ ಸ್ಯಾನಿಟೈಸರ್‌, 1,65,000 ಮಾಸ್ಕ್‌, 2000 ಎನ್‌-95 ಮಾಸ್ಕ್‌, 50 ಕ್ಯಾಪ್‌ಗಳು, 60 ವಿಶೇಷ ಮಾದರಿಯ ಸರ್ಜಿಕಲ್‌ ಗ್ಲೌಸ್‌, 3 ಬ್ಲ್ಯಾಕ್‌ ಸರ್ಜಿಕಲ್‌ ಗ್ಲೌಸ್‌, 85 ಗಾಗಲ್ಸ್‌, 300 ಫಾಗ್‌ ಫ್ರೀ ಮಾಸ್ಕ್‌ಗಳನ್ನ ಒಳಗೊಂಡಿದೆ. ಇದನ್ನು ಹೊತ್ತು ಬೆಂಗಳೂರಿನಿಂದ ಹೊರಟಿದ್ದ ಟ್ರಕ್‌ ಮಂಗಳೂರನ್ನು ತಲುಪಿದೆ.
ಸರಕಾರ ಯಾವುದೇ ಇರಲಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಜನಪ್ರತಿನಿಧಿಗಳ ಚಿತ್ತ ಇನ್ಫೋಸಿಸ್ ನತ್ತ. ಯಾರೂ ಅವರ ಬಳಿ ಬಂದು ಕೇಳುವ ಅಗತ್ಯವೇ ಇಲ್ಲ. ಸ್ವತಃ ಅವರೆ ಬಂದು ಸರಕಾರಕ್ಕೆ ಸಲಹೆ ನೀಡಿ  ಸಹಾಯ ಮಾಡುತ್ತಾರೆ.
………….
 *ಬಾಕ್ಸ್…..
ಹಸಿದ ಹೊಟ್ಟೆಗಳಿಗೆ ಅನ್ನ ನೀಡಲು ಸಲಹೆ*
ಕರೋನಾದಿಂದ ರಾಜ್ಯದಲ್ಲಿ ನೆಲೆಸಿರುವ ಬೀದಿಬದಿ ಜನ, ಕೊಳಗೇರಿ ನಿವಾಸಿಗಳು ಒಂದೊತ್ತಿನ ಊಟಕ್ಕೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದನ್ನು ಪರಿಗಣಿಸಿ ಸುಧಾಮೂರ್ತಿ ಅವರು ಅಕ್ಷಯ ಪಾತ್ರಾ ಸಂಸ್ಥೆ ಜತೆ ಕೈಜೋಡಿಸಿ ಆಹಾರ ಕಿಟ್ ನೀಡಲು ಸಲಹೆ ನೀಡಿದ್ದಾರೆ. ಮನೆಗಳಿಗೆ ಹೋಗಿ ಕಿಟ್ ಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಸಿದ್ಧಾಂತ ಸುಧಾಮೂರ್ತಿ ಅವರು ರೂಢಿಸಿಕೊಂಡಿದ್ದಾರೆ. ಕರೋನಾದಿಂದ  ಜಿಲ್ಲೆಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು  ವೀಕ್ಷಿಸಿ ತಕ್ಷಣವೇ ಪರಿಹಾರ ಕಲ್ಪಿಸುವ ಕರುಣಾಮಯಿ ಅವರು‌‌.