Friday, 13th December 2024

ಕರೋನಾ ನಿಯಂತ್ರಣಕ್ಕೆ ಅಗತ್ಯ ಪರಿಕರ ಶೀರ್ಘ ಖರೀದಿ: ಶ್ರೀರಾಮುಲು

ಚಿತ್ರದುರ್ಗ:

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲೆಗೆ ಅಗತ್ಯ ಇರುವ ಎಲ್ಲ ವೈದ್ಯಕೀಯ ಪರಿಕರಗಳನ್ನು ಕೂಡಲೆ ಖರೀದಿಸುವಂತೆ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ತಡೆ ಸಂಬಂಧ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್-19 ವೈರಾಣು ಹರಡದಂತೆ ಜಿಲ್ಲಾಡಳಿತದ ವತಿಯಿಂದ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಕೋವಿಡ್-19 ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕೋವಿಡ್-19 ಆಸ್ಪತ್ರೆಗೆ ಅಗತ್ಯವಿರುವ ವೆಂಟಿಲೇಟರ್, ವೈಯಕ್ತಿಕ ಸುರಕ್ಷತಾ ಉಪಕರಣಗಳ ಕಿಟ್ (ಪಿಪಿಇ), ಎನ್-95 ಮಾಸ್ಕ್, ಸ್ಯಾನಿಟೈರ್, ಆಕ್ಸಿಜನ್ ಪೂರೈಕೆ ಸೇರಿದಂತೆ ಎಲ್ಲ ಅಗತ್ಯ ಪರಿಕರ ಖರೀದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಮಾತನಾಡಿ, ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡ ಮಾಡಲಾಗಿದ್ದು, ಹೊರದೇಶ, ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬಂದವರನ್ನು ಗುರುತಿಸಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಭೀಮಸಮುದ್ರದ ಒಂದು ಪಾಸಿಟಿವ್ ಪ್ರಕರಣ ಹೊರತು ಪಡಿಸಿ ಇಲ್ಲಿಯವರೆಗೆ ಬೇರೆ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಭೀಮಸಮುದ್ರ ಗ್ರಾಮವನ್ನು 5 ಕಿ.ಮೀ ರೇಡ್ ಝೋನ್ ಮಾಡಿ 28 ದಿನ ಕಣ್ಗಾವಲ್ಲಿನಲ್ಲಿಟ್ಟಿದ್ದೇವೆ ಎಂದು ಹೇಳಿದರು.

ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ರೇಡಿಯೋ ಕಾರ್ಯಕ್ರಮದ ಮೂಲಕ, ಕರಪತ್ರ, ಪೋಸ್ಟರ್, ಐಇಸಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ 101 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫೀವರ್ ಕ್ಲಿನಿಕ್ ತೆರೆದು ಜ್ವರ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಜಿಲ್ಲೆಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆ ಸಂಪರ್ಕಿಸುವ ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 32 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿದವರ ಮೇಲೆ 350 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ, 631 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಇನ್ನಷ್ಟು ಅಗತ್ಯ ಇರುವ 30 ವಾಹನಗಳ ವ್ಯವಸ್ಥೆ, 65 ಮೆಗಾ ಫೋನ್, 120 ಟಾರ್ಚ್, 600 ಬ್ಯಾರಿಕೇಡ್‍ಗಳ ವ್ಯವಸ್ಥೆ ಮಾಡುವಂತೆ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಾಂಬ ಮಾತನಾಡಿ, ಪ್ರತಿ ಗ್ರಾಮದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೂ ಸೇರಿದಂತೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಸೈನಿಕರನ್ನು ನೇಮಕ ಮಾಡಲಾಗಿದೆ. ಗ್ರಾಮಗಳಲ್ಲಿ ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ಮನೆ ಮನೆಗೆ ಅಗತ್ಯ ಸೇವೆಗಳನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಅಪರ ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.