Friday, 13th December 2024

ಕರೋನಾ:  775 ಬೆಡ್​ ಸರಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆ

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು:
 ಟಾರ್ಸ್​ಫೋರ್ಸ್ ಸಭೆಯಲ್ಲಿ ಆ್ಯಂಬುಲೆನ್ಸ್ ಬಗ್ಗೆ ಚರ್ಚೆಯಾಗಿದ್ದು, ಪ್ರತಿ ವಾರ್ಡ್​ಗೆ ಎರಡು ಆ್ಯಂಬುಲೆನ್ಸ್ ಫಿಕ್ಸ್ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ 400 ಆ್ಯಂಬುಲೆನ್ಸ್​ಗಳನ್ನು ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಟಾರ್ಸ್​ಫೋರ್ಸ್​ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, 775 ಬೆಡ್​ಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಸಿದ್ಧ ಮಾಡುವುದು,  ಟೆಸ್ಟಿಂಗ್ ಸಂಖ್ಯೆ ಜಾಸ್ತಿ ಮಾಡುಲು ತೀರ್ಮಾನಿಸಲಾಗಿದೆ. ಪರೀಕ್ಷೆಗಾಗಿ ಜಿಲ್ಲೆಗಳಿಂದ ಬೆಂಗಳೂರಿಗೆ ಹೆಚ್ಚು ಪ್ರಕರಣಗಳು ಬರುತ್ತಿವೆ. ಇದರಿಂದ ‌ಇಲ್ಲಿ  ಹೆಚ್ಚು ಒತ್ತಡ ಆಗುತ್ತಿದೆ. ಹೀಗಾಗಿ ಮುಂದೆ ಪ್ರತಿ ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ಜಾಸ್ತಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇವೆ. ಕರೋನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಸಮಸ್ಯೆ ಆಗಿತ್ತು. ಇದರ ಬಗ್ಗೆ ತಜ್ಞರಿಂದ ವರದಿ ಕೇಳಿದ್ದೆವು. ಇಂದು ವರದಿ ಬಂದಿದೆ. ಯಾರಿಗೆ ಹೋಂ ಕ್ವಾರಂಟೈನ್ ಮಾಡಬೇಕು, ಯಾವ ಮಾನದಂಡ ಅನುಸರಿಸಬೇಕು, ಯಾವ ಆರೋಗ್ಯ ಸಲಹೆ ಕೊಡಬೇಕು ಅಂತ ಸರ್ಕಾರದ ಮಾರ್ಗಸೂಚಿಗಳು ಬಂದಿವೆ. ಇದೇ ಆಧಾರದ ಮೇಲೆ ಸಮಿತಿ ವರದಿ ಕೊಟ್ಟಿದೆ. ತಜ್ಞರ ವರದಿಯ ಶಿಫಾರಸುಗಳನ್ನು ಟಾಸ್ಕ್ ಫೋರ್ಸ್ ನಲ್ಲಿ ಒಪ್ಪಿಕೊಳ್ಳಲಾಗಿದೆ ಎಂದರು.
ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ದೇಶದಲ್ಲಿ ಕರೋನಾ ಸಾವಿನ ಪ್ರಮಾಣ ಶೇ.2.09ರಷ್ಟಿದೆ. ರಾಜ್ಯದಲ್ಲಿ 18,016 ಪ್ರಕರಣಗಳಲ್ಲಿ 9400 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಸಾವಿನ ಪ್ರಮಾಣ ಶೇ.1.50ರಷ್ಟಿದೆ. ಬೆಂಗಳೂರಿನಲ್ಲಿ ಶೇ.1.61ರಷ್ಟಿದೆ. ಬೆಂಗಳೂರಿನಲ್ಲಿ ಐಸಿಯುನಲ್ಲಿ ಶೇ. 2ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.1.71ರಷ್ಟು ಐಸಿಯುನಲ್ಲಿದ್ದಾರೆ.
ಕರೋನಾ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಕಳೆದ 4 ತಿಂಗಳಿಂದ 1,450 ಪ್ರಕರಣ ಇದ್ದವು. ಕಳೆದ 9 ದಿನಗಳಿಂದ ನಾಲ್ಕು ಪಟ್ಟು ಹೆಚ್ಚಳ ಆಗಿದೆ. ಬೆಂಗಳೂರಿನಲ್ಲಿ ಡಿಸ್ಚಾರ್ಜ್ ರೇಟ್ ಇಳಿಕೆಯಾಗಿದ್ದರೂ ಕರ್ನಾಟಕದಲ್ಲಿ ಆ ಪ್ರಮಾಣ ಇಲ್ಲ ಎಂದು ಹೇಳಿದರು.
 ಸಾವು ಸಂಭವಿಸಿದಾಗ ಅಮಾನವೀಯವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೂ ಕ್ವಾರಂಟೈನ್​ನಲ್ಲಿದ್ದಾಗ ನಿಯಮ ಉಲ್ಲಂಘಿಸಿದವರ ಮೇಲೂ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. ದಿನಕ್ಕೆ 15 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಇದೀಗ ಆ ಸಂಖ್ಯೆಯನ್ನು 20ರಿಂದ 25 ಸಾವಿರಕ್ಕೆ ಹೆಚ್ಚಿಸುವ ಚಿಂತನೆ ಇದೆ.  ಒಂದು ಲಕ್ಷ ಟೆಸ್ಟ್ ಈಗಾಗಲೇ ಮಾಡಿದ್ದೇವೆ. ಗಡಿ ಮುಚ್ಚುವ, ಲಾಕ್ ಡೌನ್ ಮಾಡುವ ಯಾವ ನಿರ್ಧಾರವೂ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
—+++
ಕ್ವಾರಂಟೈನ್ ಅವಧಿ 17 ದಿನಕ್ಕೆ ಏರಿಕೆ
ಶನಿವಾರದಿಂದ  ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ. ಕಡಿಮೆ‌ ರೋಗ‌ ಲಕ್ಷಣ ಇದ್ದವರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು. ಪ್ರತ್ಯೇಕ ಕೊಠಡಿ, ಶೌಚಾಲಯ ಇದ್ದರೆ ಮಾತ್ರ ಮನೆಯಲ್ಲಿ ಕ್ವಾರಂಟೈನ್​ಗೆ ಅವಕಾಶ ನೀಡಲಾಗುತ್ತದೆ. ಮನೆಯಲ್ಲಿ ಅವರನ್ನು‌ ನೋಡಿಕೊಳ್ಳಲು ಒಬ್ಬರು ಇರಲೇಬೇಕು. ಇಲ್ಲವಾದರೆ ಅವರನ್ನು ಸರಕಾರ ಕ್ವಾರಂಟೈನ್ ಮಾಡಲಿದೆ. ಕ್ವಾರಂಟೈನ್ ಅವಧಿಯನ್ನು 17 ದಿನಗಳಿಗೆ ಏರಿಕೆ ಮಾಡಲಾಗಿದೆ. ವೃದ್ಧರಿಗೆ ಕಡಿಮೆ ಲಕ್ಷಣ ಇದ್ದರೂ ಕ್ವಾರಂಟೈನ್ ಮಾಡಲಾಗುವುದು. ಯಾರೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದು ಬೇಡ. ಆಯಾ ಭಾಗದಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ‌ ಸಿಗಲಿದೆ. ರಾಜ್ಯವ್ಯಾಪಿ ಬೂತ್​ಗಳಿಗೊಂದರಂತೆ ಟಾಸ್ಕ್ ಕಮಿಟಿ ಇರಲಿದೆ.