Saturday, 14th December 2024

ಕರ್ತವ್ಯದಲ್ಲಿದ್ದ ಹಾಸನ ಜಿಲ್ಲೆಯ ಸಿಆರ್‌ಪಿಎಫ್ ಯೋಧ ಸಾವು

 

ಹಾಸನ:

ಸಿಆರ್‌ಪಿಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಛತ್ತೀಸ್​ಗಡದ ಸುಕ್ಮಾ ಕ್ಯಾಂಪ್​​ನಲ್ಲಿ ನಡೆದಿದೆ.

ಹಾಸನ ತಾಲ್ಲೂಕಿನ ಈಚಲಹಳ್ಳಿ ಗ್ರಾಮದ 42 ವರ್ಷದ ಯೋಧ ಹೇಮಂತ್‌ಕುಮಾರ್ ಛತ್ತಿಸಗಡದ ಸುಕ್ಮಾದಲ್ಲಿ 150ನೇ ಸಿಆರ್‌ಪಿಎಫ್‌ ಬೆಟಾಲಿಯನ್‌ನಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಛತ್ತೀಸ್​ಗಡದ ಸುಕ್ಮಾ ಕ್ಯಾಂಪ್​​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯೋಧ ಹೇಮಂತ್‌ಕುಮಾರ್ 19 ವರ್ಷಗಳ ಕಾಲ ಸಿಆರ್​ಪಿಎಫ್​ ನಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತಿ ಹೊಂದಲು ಕೇವಲ ಹತ್ತು ತಿಂಗಳು ಬಾಕಿ ಇರುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ‌.

ಮೃತರು ದಾಸೇಗೌಡ ಎಂಬುವವರ ಮಗನಾಗಿದ್ದು, ಪತ್ನಿ ಹಾಗೂ ಓರ್ವ ಗಂಡು ಹಾಗೂ ಹೆಣ್ಣು ಮಗಳನ್ನು ಅಗಲಿದ್ದಾರೆ. ಇನ್ನೆರೆಡು ದಿನದೊಳಗೆ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ.