Saturday, 14th December 2024

ಕಳಪೆ ಬೇಳೆ ಸರಬರಾಜು ಮಾಡಿದರೆ ಕಠಿಣ ಕ್ರಮ: ಸಚಿವ ಕೆ. ಗೋಪಾಲಯ್ಯ

ಹಾಸನ:

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಪೂರೈಸಲಾಗುತ್ತಿದ್ದ ಬೇಳೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಇಂದು ಚನ್ನರಾಯಪಟ್ಟಣ ಹಾಗೂ ಹಾಸನದಲ್ಲಿ ಆಹಾರ ನಿಗಮದ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್ ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್ ಹಾಗೂ ಆಹಾರ ಇಲಾಖೆ ಅಧಿಕಾರಿ ಸೇರಿದಂತೆ ಗೋದಾಮುಗಳಿಗೆ ಭೇಟಿ ನೀಡಿದ ಸಚಿವರು ದಾಸ್ತಾನು ಇದ್ದ ಬೇಳೆ ಕಾಳುಗಳನ್ನು ಸ್ಥಳದಲ್ಲೇ ಪರಿಶೀಲನೆ ನಡೆಸಿದರು.

ಎರಡು ಗೋದಾಮುಗಳಲ್ಲಿ ಲಭ್ಯವಿದ್ದ ಬೇಳೆಕಾಳು ಬಳಕೆಗೆ ಯೋಗ್ಯ ಎಂದು ಪರೀಕ್ಷೆ ವರದಿ ಬಂದ ಕಾರಣ ಜಿಲ್ಲೆಯ ಎಲ್ಲಾ ತಾಲ್ಲೂಕು ಗೋದಾಮುಗಳಲ್ಲಿಯೂ ಇದೇ ರೀತಿ ತಪಾಸಣೆ ನಡೆಸಬೇಕು ಹಾಗೂ ಇತರೆ ಜಿಲ್ಲೆಗಳಲ್ಲಿನ ಬೇಳೆಕಾಳುಗಳ ಮಾದರಿ ತರಿಸಿ ತಪಾಸಣೆಗೆ ಒಳಪಡಿಸಿ ಗುಣಮಟ್ಟದಲ್ಲಿ ಕಳಪೆಯೆಂದು ಕಂಡು ಬಂದರೆ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮಕ್ಕಳಿಗೆ ನೀಡುವ ಬೇಳೆ ಕಳಪೆ ಗುಣಮಟ್ಟದ್ದಾಗಿದೆ ಎನ್ನುವ ಆರೋಪದ ಮೇಲೆ ಖುದ್ದಾಗಿ ಎಲ್ಲಾ ತಾಲ್ಲೂಕಿಗೆ ಭೇಟಿ ನೀಡಿ ಸರಬರಾಜಾಗಿರುವ ಬೇಳೆಯನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದೇನೆ. ಬೇಳೆ ಕಳಪೆ ಗುಣಮಟ್ಟದ್ದಾಗಿವೆ ಎಂದು ಸಾಬೀತಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.