Friday, 13th December 2024

ಜನರ ಆರೋಗ್ಯದ ಜತೆ ಚೆಲ್ಲಾಟ ಬೇಡ – ಕಾಂಗ್ರೆಸ್ಸಿಗೆ ಡಿ.ಸಿ.ಎಂ. ಸವದಿ ಎಚ್ಚರಿಕೆ

ಇಡೀ ದೇಶದಾದ್ಯಂತ ಒಕ್ಕೋರಲಿನಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಚುನಾವಣಾ ರ್ಯಾಲಿಯ ರೀತಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಗಳೂರಿನಲ್ಲಿ ಸೈಕಲ್ ಜಾಥಾ ನಡೆಸುತ್ತಾ ಸಾವಿರಾರು ಮಂದಿ ತಮ್ಮ ಕಾರ್ಯಕರ್ತರೊಂದಿಗೆ ‘ಕಾನೂನು ಭಂಗ’ ಮಾಡಿರುವುದು ತೀವ್ರ ಖಂಡನೀಯ ಎಂದು ಡಿ.ಸಿ.ಎಂ. ಸವದಿ ಹೇಳಿದ್ದಾರೆ..

ಕಾಂಗ್ರೆಸ್ಸಿನ ಈ ರ್ಯಾಲಿ ಸಾರ್ವಜನಿಕರ ಜೀವದೊಂದಿಗೆ ಅವರು ನಡೆಸುತ್ತಿರುವ ಚೆಲ್ಲಾಟವಲ್ಲದೇ ಮತ್ತೇನೂ ಅಲ್ಲ. ಕೊರೋನಾದಂತಹ ಅಪಾಯಕಾರಿ ಸಾಂಕ್ರಾಮಿಕ ರೋಗ ವ್ಯಾಪಕವಾಗುತ್ತಿರುವುದನ್ನು ತಡೆಗಟ್ಟಲು ನಮ್ಮ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರೆ ಈ ಪಯತ್ನಗಳಿಗೆ ಜವಾಬ್ದಾರಿಯುತ ವಿರೋಧಪಕ್ಷವಾಗಿ ಸಹಕಾರ ನೀಡುವುದನ್ನು ಬಿಟ್ಟು ಅಮಾಯಕರ ಆರೋಗ್ಯಕ್ಕೇ ಸಂಚಕಾರ ಉಂಟುಮಾಡುವಂತಹ ಈ ರೀತಿ ರ್ಯಾಲಿ-ಪ್ರತಿಭಟನೆಗಳ ಗಿಮಿಕ್‍ಗೆ ಕಾಂಗ್ರೆಸ್ ಇಳಿದಿರುವುದು ಆ ಪಕ್ಷ ಹತಾಶೆಯ ಸ್ಥಿತಿಗೆ ತಲುಪಿರುವುದಕ್ಕೆ ದ್ಯೋತಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕೊರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಪಕ್ಷಗಳೂ ಭಾಗಿಯಾಗಿ ಜನದಟ್ಟಣೆ ಸೇರುವುದನ್ನು ತಪ್ಪಿಸಲು ಅಲಿಖಿತವಾಗಿ ಒಪ್ಪಂದ ಮಾಡಿಕೊಂಡಿರುವಾಗ ಕಾಂಗ್ರೆಸ್ಸು ಈ ರೀತಿ ಸಾಂಕ್ರಾಮಿಕ ರೋಗ ಹರಡಲು ಅವಕಾಶವಾಗುವಂತೆ ರ್ಯಾಲಿ ನಡೆಸಿದ್ದು ನಿಜಕ್ಕೂ ಅಕ್ಷಮ್ಯ. ಒಂದು ವೇಳೆ ಕಾಂಗ್ರೆಸ್ ಮುಖಂಡರಿಗೆ ಪ್ರತಿಭಟಿಸಲು ನೈಜ ಕಾರಣವಿದ್ದರೆ ಅವರು ಸಮೂಹ ಮಾಧ್ಯಮಗಳ ಮೂಲಕ ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಬಹುದಿತ್ತು. ಅದನ್ನು ಬಿಟ್ಟು ಪೊಲೀಸ್ ಇಲಾಖೆಯ ಸಮ್ಮತಿಯನ್ನು ಪಡೆಯದೇ ಅಮಾಯಕರ ಜೀವಕ್ಕೆ ಕುತ್ತು ತರುವಂಥ ಕೃತ್ಯಕ್ಕೆ ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ?

ರಾಜಕೀಯ ಮಾಡಲು ಇತರೆ ಬೇಕಾದಷ್ಟು ವಿಷಯಗಳಿವೆ. ಆದರೆ ದೇಶದ ಹಿತ, ಸಾರ್ವಜನಿಕರ ಆರೋಗ್ಯ ರಕ್ಷಣೆಯಂಥ ವಿಷಯಗಳಲ್ಲಿ ರಾಜಕೀಯ ಲಾಭ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವುದೇ ನಿಜವಾದ ಮಾನವೀಯತೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ಈ ಕಾಂಗ್ರೆಸ್ ಮುಖಂಡರು ನಮ್ಮ ರಾಜ್ಯದ ಸಾಮಾಜಿಕ ಹಿತಕ್ಕೇ ಕೊಡಲಿಪೆಟ್ಟು ಹಾಕುತ್ತಿದ್ದಾರೆ.

ಒಂದು ದಿನ ಇವರೆಲ್ಲಾ ತಮ್ಮ ದುಬಾರಿ ಕಾರುಗಳನ್ನು ಮನೆಯಲ್ಲಿ ಬಿಟ್ಟು ಸೈಕಲ್ ಹತ್ತಿದಾಕ್ಷಣ ಪೆಟ್ರೋಲ್ ದರ ಇಳಿದುಬಿಡುತ್ತದೆಯೇ? ಅಸಲಿಗೆ ಇದು ಕೇವಲ ಬೂಟಾಟಿಕೆಯ ಪ್ರದರ್ಶನವಾಗಿ ಕಾಣುತ್ತದೆ ಅಷ್ಟೇ! ಎಂದು ಹೇಳಿದ್ದಾರೆ..