ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್‌ಹೌಸಿಂಗ್ ಸೊಸೈಟಿ (ಕೆಡಿಎಲ್‌ಡಬ್ಲ್ಯುಎಸ್) ಅಧಿಕಾರಿಗಳು ಹಣದಾಸೆಗೆ ಮಾರಕ ಕರೊನಾ ವೈರಸ್‌ನ ಸಾವು ನೋವಿನಲ್ಲೂ ಲಂಚಾವತಾರ ನಡೆಸಿರುವ ಅಕ್ರಮ ಕರ್ಮಕಾಂಡ ತಡವಾಗಿ ಬೆಳಕಿಗೆ ಬಂದಿದೆ.
ಕರೋನಾ ಸೋಂಕಿತರನ್ನು ರಕ್ಷಿಸಲು ಔಷಧೋಪಚಾರ ನಡೆಸುವ ವೇಳೆ ಸೋಂಕಿತರಿಂದ ವೈರಸ್ ಹರಡದಂತೆ ರಕ್ಷಣೆ ಪಡೆಯಲು ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ನೀಡುವ ವೈಯಕ್ತಿಕ ಸುರಕ್ಷತಾ ಸಾಧನಗಳು(ಪಿಪಿಇ ಕಿಟ್) ಅತ್ಯಂತ ಕಳಪೆಯಿಂದ ಕೂಡಿವೆ.
ಕಳಪೆ ಕಿಟ್ ವಿತರಣೆ:
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ-2000ರ(ಕೆಟಿಪಿಪಿ ಕಾಯ್ದೆ) ಟೆಂಡರ್ ನಡೆಸದೆ ದರಪಟ್ಟಿ ಆಧಾರದ ಮೇಲೆ ಖಾಸಗಿ ಸಂಸ್ಥೆಗೆ 22 ಕೋಟಿ ರೂ.ವೆಚ್ಚದ 3 ಲಕ್ಷ ಪಿಪಿಇ ಕಿಟ್ ಪೂರೈಸಲು ಖರೀದಿ ಆದೇಶ ನೀಡಲಾಗಿತ್ತು. ಆದರೆ, ಸದರಿ ಸಂಸ್ಥೆಯ ಟೆಂಡರ್ ನಿಯಮಗಳ ಸಾಮರ್ಥ್ಯ ಪರೀಕ್ಷಿಸಿದೆ ಸಂಸ್ಥೆಯ ಅಧಿಕಾರಿಗಳು ಕೋಟಿಗಟ್ಟಲೆ ಕಮಿಷನ್ ಪಡೆದು ನಿಯಮಬಾಹಿರವಾಗಿ ಖರೀದಿ ಆದೇಶ ಕೊಟ್ಟಿದ್ದಾರೆ. ಈ ಸಂಸ್ಥೆಯು ಸರಬರಾಜು ಮಾಡಿರುವ 1.5 ಲಕ್ಷ ಪಿಪಿಇ ಕಿಟ್ ಅತ್ಯಂತ ಕಳಪೆ ಗುಣಮಟ್ಟದಾಗಿದೆ. ಈ ಬಗ್ಗೆ ಸಂಸ್ಥೆಗೆ ಸಾಕಷ್ಟು ದೂರುಗಳು ಬಂದಿವೆ.
ಅಧಿಕಾರಿಗಳೇ ಶಾಮೀಲು
ರಾಜ್ಯ ಸರಕಾರದಿಂದ ಕರೋನಾ ನಿರ್ವಹಣೆಗಾಗಿ ಈಗಾಗಲೇ ಸಂಸ್ಥೆಗೆ ನೂರಾರು ಕೋಟಿ ರೂ. ಅನುದಾನ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಂಸ್ಥೆಯ ಕೆಲ ಅಧಿಕಾರಿಗಳು ಪಿಪಿಇ ಕಿಟ್ ಸಂಬಂಧ ಖರೀದಿ ಆದೇಶ ನೀಡಲು ಶೇ.12 ಕಮಿಷನ್ ಪಡೆಯುತ್ತಿದ್ದಾರೆ. ಇಬ್ಬರು ಮಹಿಳೆ ಅಧಿಕಾರಿಗಳಂತೂ ಸಂಸ್ಥೆಯ ಅಪರ ನಿರ್ದೇಶಕರ ಹೆಸರಿನಲ್ಲಿ ಪೂರೈಕೆದಾರರಿಂದ ಹಣ ವಸೂಲಿಗೆ ಇಳಿದಿದ್ದಾರೆ.
ಗುಣಮಟ್ಟ ಕಿಟ್‌ಗಾಗಿ ಪ್ರತಿಭಟನೆ:
ಕಳಪೆ ಪಿಪಿಇ ಕಿಟ್ ನೀಡಿರುವುದನ್ನು ವಿರೋಧಿಸಿ ಬೆಂಗಳೂರಿನ ಐಎಸ್‌ಐ ಮತ್ತಿತರರ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು ನಮಗೆ ಸುರಕ್ಷಿತ ಮತ್ತು ಗುಣಮಟ್ಟದ ಪಿಪಿಇ ಕಿಟ್ ವಿತರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪಿಪಿಇ ಕಿಟ್ ಏನಿರಲಿದೆ?
ವೈದ್ಯರು ಸುರಕ್ಷತೆಗಾಗಿ ನೀಡುವ ಪಿಪಿಇ ಕಿಟ್‌ನಲ್ಲಿ 10 ಬಿಡಿ ಉತ್ಪನ್ನಗಳು ಇರಲಿವೆ. ೇಸ್ ಮಾಸ್ಕ್, ಕನ್ನಡಕ, ಎನ್95 ಮುಖಗವಸು, ಶಸಚಿಕಿತ್ಸೆಯ ಮುಖವಾಡಗಳು, ಕೈಗವಸು, ಎರಡು ಪದರದ ನಿಲುವಂಗಿ, ಪಾದರಕ್ಷೆಗಳ ಕವರ್, ತ್ಯಾಜ್ಯ ಬಿಸಾಡುವ ಚೀಲ, ಪ್ರಾಸ್ಟಿಕ್ ಏಪ್ರಾನ್ ಮತ್ತಿತರರ ಉತ್ಪನ್ನಗಳು ಇರಲಿವೆ.
ಏನಿದು ಕೆಡಿಎಲ್‌ಡಬ್ಲ್ಯುಎಸ್?
ಆರೋಗ್ಯ ಇಲಾಖೆಯ ಅಧೀನದ ಕೆಡಿಎಲ್‌ಡಬ್ಲೃಎಸ್ ಗುಣಮಟ್ಟ ಔಷಧಿಗಳನ್ನು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಸಕಾಲದಲ್ಲಿ ಪೂರೈಸುವ ಸಂಸ್ಥೆಯಾಗಿದೆ. ಇದಕ್ಕಾಗಿ ಪ್ರತಿ ವರ್ಷ ಬ್ಯಾಂಡೇಜ್ ಕ್ಲಾತ್, ಕಾಟನ್, ಗ್ಲೂಕೋಸ್ ಬಾಟಲ್, ಚುಚ್ಚುಮದ್ದು ಸೇರಿ ವಿವಿಧ ಔಷಧಿಗಳನ್ನು ಪೂರೈಸುತ್ತಿದೆ.
ಆತ್ಮಸಾಕ್ಷಿಯಿಂದ ಕೆಲಸ ಮಾಡಿ:
ಕರೊನಾ ವೈರಸ್ ದಿನೇದಿನೆ ಹೆಚ್ಚು ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಡಿಎಲ್‌ಡಬ್ಲ್ಯುಎಸ್ ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಹಣ ಮಾಡಲು ಹೊರಟಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಪ್ರಾಣದ ಹಂಗು ತೊರೆದು 24 ಗಂಟೆಗಳ ಕಾಲ ಕೆಲಸ ಮಾಡುವ ವೈದ್ಯರಿಗೆ ಗುಣಮಟ್ಟ ಕಿಟ್ ನೀಡುವುದು ಅಧಿಕಾರಿಗಳ ಜವಾಬ್ದಾರಿ.
ಕಳಪೆ ಕಿಟ್ ಹಿಂಪಡೆಯಿರಿ
ಪ್ಲಾಸ್ಟಿಕ್ ಸರ್ಚ್ ಸಂಸ್ಥೆಯಿಂದ ಸರಬರಾಜು ಮಾಡಿರುವ ಪಿಪಿಇ ಕಿಟ್ ಕಳಪೆಯಿಂದ ಕೂಡಿವೆ ಎಂಬುದರ ಬಗ್ಗೆ ಸಾಕಷ್ಟು ದೂರುಗಳ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣೆ ಹಿಂಪಡೆಯುವಂತೆ ಕೆಡಿಎಲ್‌ಡಬ್ಲೃಎಸ್ ಸಂಸ್ಥೆಯ ಅಪರ ನಿರ್ದೇಶಕ ಐಎಎಸ್ ಅಧಿಕಾರಿ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ. ಕೆಲ ಉಗ್ರಾಣದಲ್ಲಿ ಸಂಗ್ರಹಿಸಿರುವ ಹಾಗೂ ಇತರೆ ಜಿಲ್ಲೆಗಳಿಗೆ ರವಾನು ಮಾಡಿರುವ ಕಿಟ್ ಅನ್ನು ತಕ್ಷಣ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಜತೆ ಚರ್ಚಿಸಿ ಬೆಂಗಳೂರು ಗ್ರಾಮಾಂತರ ಉಗ್ರಾಣಕ್ಕೆ ಹಿಂದಿರುಗಿಸಿ ಡಿಎಚ್‌ಬಿ ಗ್ಲೋಬಲ್ ಸಂಸ್ಥೆಯಿಂದ ಖರೀದಿಸಲಾಗಿರುವ ಪಿಪಿಇ ಕಿಟ್ ತೆಗೆದುಕೊಂಡು ಹೋಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.