ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.ಶರ್ಮಿಳಾ ಮಾಂಡ್ರೆ ಮತ್ತು ಆಕೆಯ ಸ್ನೇಹಿತರು ಮಾದಕವಸ್ತು ನಶೆಯಲ್ಲಿ ಅಪಘಾತ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತಕ್ಕೂ ಮುನ್ನ ಶರ್ಮಿಳಾ ಮಾಂಡ್ರೆ, ಲೋಕೇಶ್ಹಾಗೂ ಮತ್ತಿತರು ಪಾರ್ಟಿ ಮಾಡಿ ಆ ನಶೆ ಕಾರು ಆಕ್ಸಿಡೆಂಟ್ ಎಸಗಿದ್ದಾರೆ ಎನ್ನುವ ಶಂಕೆ ತನಿಖೆ ವೇಳೆ ವ್ಯಕ್ತವಾಗಿದೆ. ಏಕೆಂದರೆ ಅಪಘಾತವಾದ ಕಾರಿನಲ್ಲಿ ಕೆಲವು ಮಾದಕ ವಸ್ತುಗಳ ರೀತಿಯ ಪದಾರ್ಥಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಈಗಾಗಲೇ ಆ ವಸ್ತುಗಳನ್ನು ಪೋಲಿಸರು ಜಪ್ತಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಭಯದಿಂದ ಆಸ್ಪತ್ರೆ ಬದಲಾವಣೆ?
ಅಪಘಾತ ಬಳಿಕ ಆರೋಪಿಗಳು ತಲೆಮರೆಸಿಕೊಂಡಿರೋದೇಕೆ? ಮೂರು ಆಸ್ಪತ್ರೆ ಗಳನ್ನು ಬದಲಿಸಿದ್ದೇಕೆ? ಈ ಪ್ರಶ್ನೆಗಳು ಕೂಡ ಪೋಲಿಸರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ. ಡ್ರಗ್ಸ್ ಸೇವನೆ ವಿಷಯ ಗೊತ್ತಾಗುತ್ತೆ ಎನ್ನುವ ಭಯದಲ್ಲಿ ಆರೋಪಗಳು ಮೂರು ಆಸ್ಪತ್ರೆ ಬದಲಿಸಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಮೊದಲು ವಿಕ್ರಂ, ಪೋರ್ಟಿಸ್ ನಂತರ ಹಾಸ್ ಮೆಟ್ ಆಸ್ಪತ್ರೆಗೆ ಅವರು ಭೇಟಿ ನೀಡಿದ್ದರು. ಮೆಡಿಕಲ್ ಚೆಕಪ್ ಗೆ ಹೆದರಿ ಆಸ್ಪತ್ರೆಗಳನ್ನು ಬದಲಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಭಯದಿಂದಲೇ ಅವರೆಲ್ಲಾ ವಿಚಾರಣೆಗೆ ಬರದೇ ಆರೋಗ್ಯದ ನೆಪವೊಡ್ಡಿ ಪ್ರಕರಣದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಪ್ರಕರಣದ ತನಿಖೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಮುಚ್ಚಿ ಹಾಕಲು ಯತ್ನ?
ಏ.೪ ರಂದು ನಸುಕಿನ ಜಾವ ೩ ಗಂಟೆ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಅದೇ ದಿನ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದರು. ಆದರೆ ಪೊಲೀಸರಿಗೆ ಮಾಹಿತಿ ಸಿಗುವ ಭಯದಲ್ಲಿದ್ದ ನಟಿ ಶರ್ಮಿಳಾ ಮತ್ತು ಆಕೆಯ ಸ್ನೇಹಿತ ಲೋಕೇಶ್, ತಮ್ಮನ್ನು ವಿಚಾರಣೆ ನಡೆಸದಂತೆ, ವೈದ್ಯಕೀಯ ಪರೀಕ್ಷೆ ನಡೆಸದಂತೆ ಪೊಲೀಸರ ಮೇಲೆ ಒತ್ತಡ ಹಾಕಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಡ್ರಗ್ಸ್ ಸೇವನೆಯ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ವಿಕ್ರಂ, ಫೋರ್ಟಿಸ್ ಆಸ್ಪತ್ರೆಯ ವೈದ್ಯರಿಂದ ಕೆಲ ಮಾಹಿತಿಗಳನ್ನು ಸಂಗ್ರಹಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.