ಬೆಂಗಳೂರು:
ಕರೋನಾ ನಿರ್ವಹಣೆಗಾಗಿ ಹಗಳಿರುಳು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಅಪೊಲೊ ಆಸ್ಪತ್ರೆಯು ಉಚಿತ ಆರೋಗ್ಯ ತಪಾಸಣೆ ಸೇವೆ ಆರಂಭಿಸಿದೆ.
ಜಗತ್ತಿನಾದ್ಯಂತ ಮಾರಕ ಕರೋನಾ ದಿನೇದಿನೆ ಹೆಚ್ಚು ಬಲಗೊಳ್ಳುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಪೊಲೀಸರು 24 ಗಂಟೆಗಳ ಸೇವೆ ಸಲ್ಲಿಸಿ ಕರೊನಾ ನಿಯಂತ್ರಣಕ್ಕೆ ಯೋಧರಂತೆ ಶ್ರಮಿಸುತ್ತಿದ್ದಾರೆ. ಹೀಗಾಗಿ, ಅವರಿಗಾಗಿ ಉಚಿತ ಆರೋಗ್ಯ ತಪಾಸಣೆ ಸೇವೆ ವಿಸ್ತರಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ತಪಾಸಣೆ:
ಕೋವಿಡ್-19 ತಡೆಯಲು ಹೊರಡಿಸಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು. ಆರೋಗ್ಯ ತಪಾಸಣೆಯಲ್ಲಿ ಉಷ್ಣ ಪರೀಕ್ಷೆ(ದೇಹದ ಉಷ್ಣತೆ), ಇಸಿಜಿ(ಯಾವುದೇ ವ್ಯಾತ್ಯಾಸ ಕಂಡುಬಂದಲ್ಲಿ ಆಸ್ಪತ್ರೆಯಲ್ಲಿ ಎಕೋಕಾರ್ಡಿಯೋಗ್ರಾಫಿ ಪರೀಕ್ಷೆ), ಮಧುಮೇಹ ಪರೀಕ್ಷೆ, ರಕ್ತದೊತ್ತಡ (ಬಿಪಿ) ಪರೀಕ್ಷೆ ಸೇರಿ ಮತ್ತಿತರರ ಪರೀಕ್ಷೆಗೆ ಒಳಪಡಿಸಲಾಗುವುದು. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಾಕಿ ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗುತ್ತದೆ.
ಅಪೊಲೊ ಆಸ್ಪತ್ರೆಗಳ ಸಿಇಒ ಮಾತನಾಡಿ, ಮಾಹಾಮಾರಿ ಕರೊನಾ ವೈರಸ್‌ನಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿದೆ. ಕೆಲ ದೇಶಗಳು ತತ್ತರಿಸಿ ಹೋಗಿದ್ದು, ಲಕ್ಷಾಂತರ ಸೋಂಕಿತರ ವೈರಸ್ ಹರಡಿದೆ. ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಈ ವೈರಸ್‌ನಿಂದ ಸಾರ್ವಜನಿಕರು ಎಚ್ಚರವಹಿಸಬೇಕು. ಅಲ್ಲದೆ, ಪ್ರತಿಯೊಬ್ಬರು ಲಾಕ್‌ಡೌನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ವೈರಸ್ ನಿರ್ವಹಣೆಗಾಗಿ ಪೊಲೀಸರು ತಮ್ಮ ಜೀವನವನ್ನೇ ಪಣಕ್ಕಿಟ್ಟಿದ್ದಾರೆ. ಹೀಗಾಗಿ, ಅವರಿಗೆ ನಮ್ಮ ಸಂಸ್ಥೆಯಿಂದ ಚಿಕ್ಕ ಸೇವೆ ನೀಡಲಾಗುತ್ತಿದೆ. ಪೊಲೀಸರು ಈ ಸೇವೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಅಪೊಲೊ ಆಸ್ಪತ್ರೆಯು ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿದೆ. ಮೌಲ್ಯ ಚಾಲಿತ ಮತ್ತು ನೆರೆಹೊರೆಯ ಸಮುದಾಯದ ಅಗತ್ಯತೆಗಳನ್ನು ಪೂರೈಸುವ ಸಾಮಾಜಿಕ ಜವಾಬ್ದಾರಿ ಸಂಸ್ಥೆಯಾಗಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಬಡವರಿಗೆ, ಮಧ್ಯಮವರ್ಗದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ, ಪೊಲೀಸರಿಗೆ ಉಚಿತ ಆರೋಗ್ಯ ಸೇವೆ ಆರಂಭಿಸಿದ್ದೇವೆ ಎಂದು ಹೇಳಿದರು.
ಕರೊನಾ ಲಾಕ್‌ಡೌನ್‌ನಿಂದ ಹಗಳಿರಳು ಒತ್ತಡದಿಂದ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯದ ಕಾಳಜಿ ಬಗ್ಗೆ ಮರೆತು ಬಿಡುತ್ತೇವೆ. ಇದನ್ನು ಮನಗಂಡು ಆಪೊಲೊ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣೆ ಆರಂಭಿಸಿರುವುದರಿಂದ ನಮ್ಮಂತವರಿಗೆ ತುಂಬಾ ಅನುಕೂಲವಾಗಿದೆ ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.