Friday, 13th December 2024

ರಾಜ್ಯದಲ್ಲಿ ಕರೋನಾ ಅಟ್ಟಹಾಸ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ರಾಜ್ಯದಲ್ಲಿ ಕರೋನಾ ಅಟ್ಟಹಾಸ ಇನ್ನೂ ಮುಂದುವರಿದಿದೆ. ಇಂದು ಒಂದೇ ದಿನ ಕರ್ನಾಟಕದಲ್ಲಿ 34 ಹೊಸ ಕರೋನಾ ಕೇಸುಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡದ ಕರೋನಾ ರೋಗಿಯೊಬ್ಬರು ಬುಧವಾರ ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಕರೋನಾ ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇದುವರೆಗೂ 959 ಜನರಿಗೆ ಕರೋನಾ ಸೋಂಕು ತಗುಲಿದೆ. 33 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದು, ಓರ್ವ ರೋಗಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾನೆ. ದಕ್ಷಿಣ ಕನ್ನಡದ 58 ವರ್ಷದ ಮಹಿಳಾ ರೋಗಿಯೊಬ್ಬರು ಏಪ್ರಿಲ್ 28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

34 ಹೊಸ ಕರೋನಾ ಪ್ರಕರಣಗಳು ವರದಿಗಳ ಪೈಕಿ ಬೀದರ್- 12, ಕಲಬುರಗಿ 8, ದಾವಣಗೆರೆ -2, ಉತ್ತರ ಕನ್ನಡ- 2, ಬೆಂಗಳೂರು- 2, ದಕ್ಷಿಣ ಕನ್ನಡ- 1, ಹಾಸನ- 4, ವಿಜಯಪುರ- 2 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿಯಲ್ಲಿ 5, ಬೆಂಗಳೂರಿನಲ್ಲಿ 4, ಮಂಡ್ಯದಲ್ಲಿ 5, ದಕ್ಷಿಣ ಕನ್ನಡದಲ್ಲಿ 1, ಬಳ್ಳಾರಿಯಲ್ಲಿ 1, ಬೀದರ್​ನಲ್ಲಿ 1, ವಿಜಯಪುರದಲ್ಲಿ 1 ಕರೋನಾ ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಮುಂದೆ, 10 ವರ್ಷದೊಳಗಿನ ಮಕ್ಕಳು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಗರ್ಭಿಣಿಯರು ಅಂತಾರಾಷ್ಟ್ರೀಯ ಪ್ರಯಾಣ ಮಾಡಿದರೆ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ.

 ಕುಮಟಾದಲ್ಲಿ ಯುವಕನಿಗೆ ಕೋವಿಡ್ ದೃಢ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 2 ಪ್ರರಕಣಗಳು ದೃಢಪಟ್ಟಿವೆ. ಕುಮಟಾ ತಾಲ್ಲೂಕಿನ 26 ವರ್ಷದ ಯುವಕನಿಗೆ (ರೋಗಿ ಸಂಖ್ಯೆ 946) ಸೋಂಕು ತಗುಲಿದ್ದು, ಭಟ್ಕಳ ತಾಲ್ಲೂಕಿನ ಹೊರತಾಗಿ ಖಚಿತವಾದ ಮೊದಲ ಪ್ರಕರಣ ಇದಾಗಿದೆ. ಭಟ್ಕಳದ ಎರಡು ವರ್ಷದ ಹೆಣ್ಣುಮಗುವಿಗೂ (ರೋಗಿ ಸಂಖ್ಯೆ 929) ಕೋವಿಡ್ ದೃಢಪಟ್ಟಿದೆ.

 ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ದಾವಣಗೆರೆಯಲ್ಲಿ ಕರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 85ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ವಿಜಯಪುರದಲ್ಲಿ ಮುಂಬೈನಿಂದ ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ 13 ತಬ್ಲೀಗ್ ಸದಸ್ಯರ ಪೈಕಿ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. ಕಲಬುರಯಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ -19 ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ನಗರದ ಕಂಟೈನ್‌ಮೆಂಟ್‌ ವಲಯದಲ್ಲಿ ಸಂಚರಿಸಿದ್ದರಿಂದ ಇವರಿಗೆ ಕೋವಿಡ್ ಸೋಂಕು ತಗುಲಿತ್ತು ಎನ್ನಲಾಗಿದೆ.

ಬುಧವಾರರದ ವೇಳೆಗೆ 451 ಜನ ಗುಣಮುಖರಾಗಿ ಮನೆಗೆ ತೆರಳಿದ್ದು, ಇನ್ನುಳಿದ 464  ಜನ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. ತೀವ್ರ ಸಮಸ್ಯೆಯಿಂದ ಬಳಲುತ್ತಿರುವ 10 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ.

*ಕರೋ‌ನಾ ವಾರಿಯರ್ ಗೂ ಸೋಂಕು*

ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡುತ್ತಿದ್ದ ಶುಶ್ರೂಷಕಿಗೆ ‌ಕರೋನಾ ಸೋಂಕು ತಗುಲಿದೆ. ಕೋವಿಡ್ ವಾರ್ಡ್ ನಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು. ಇವರನ್ನ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆದರೆ ಕ್ವಾರಂಟೈನ್ ಅವಧಿ ಮುಕ್ತಾಯಕ್ಕೂ ಮುಂಚೆ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಕೋವಿಡ್ ವಾರ್ಡ್ ನಲ್ಲಿ ಕೆಲಸ ಮಾಡಿದ್ದರಿಂದ ಪಿಎಂಎಸ್ಎಸ್ ವೈ ಆಸ್ಫತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.ಕಳೆದ ಮೂರು ದಿನಗಳಿಂದ ನೆಗಡಿ ಶೀತ, ಜ್ವರ ಕಾಣಿಸಿಕೊಂಡಿತ್ತು. ಆದರೀಗ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಶುಶ್ರೂಷಕಿಗೇ ಸೋಂಕು ತಗಲಿರುವುದು ಇಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಕೋವಿಡ್ ವಾರ್ಡ್ ನಲ್ಲಿ ಬ್ಯಾಚ್ ವೈಸ್ ಕಾರ್ಯ‌ನಿರ್ವಹಿಸಲಾಗುತ್ತಿದೆ.

ಪ್ರತೀ ಬ್ಯಾಚ್ ನಲ್ಲೂ 7 ರಿಂದ 10 ಜನ ನರ್ಸ್ ಕೋವಿಡ್ ವಾರ್ಡ್ ನಲ್ಲಿ ವರ್ಕ್ ಮಾಡುತ್ತಿದ್ದಾರೆ. ಒಂದು ಬ್ಯಾಚ್ 15 ದಿನಗಳ ಕಾಲ ಕೋವಿಡ್ ವಾರ್ಡ ನಲ್ಲಿ ಕೆಲಸ ಮಾಡಲಿದೆ. 15 ದಿನ ಮುಗಿದ ಬಳಿಕ ಮುಂಜಾಗೃತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ.