ಬೆಂಗಳೂರು,
ಲಡಾಖ್ನಲ್ಲಿನ ವಾಸ್ತವ ಹತೋಟಿ ರೇಖೆಯಲ್ಲಿನ ಗುಲ್ವಾಣ್ ಕಣಿವೆಯಲ್ಲಿ ಒಬ್ಬ ಭಾರತೀಯ ಅಧಿಕಾರಿ ಮತ್ತು ಹಲವು ಸೈನಿಕರು ಸಾವಿಗೀಡಾಗಿರುವ ಬಗ್ಗೆ ಸಿಪಿಐ(ಎಂ) ರಾಜ್ಯ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ.
ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಲಡಾಖ್ ನಲ್ಲಿನ ವಾಸ್ತವ ಹತೋಟಿ ರೇಖೆಯಲ್ಲಿನ ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯು ಎರಡೂ ಕಡೆಗಳಿಂದ ನಡೆದಿತ್ತು. ಈ ವೇಳೆಯಲ್ಲಿಯೇ ಗಾಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದಿರುವುದು ದುರದೃಷ್ಟಕರ ಎಂದಿದ್ದಾರೆ.
ಕಳೆದ ಜೂನ್ ೬ ರಂದು ಇಂತಹ ಘರ್ಷಣೆ ತಪ್ಪಿಸುವ ಪ್ರಕ್ರಿಯೆ ಕುರಿತು ಚರ್ಚಿಸಲು ಎರಡೂ ದೇಶಗಳ ಕಡೆಯಿಂದ ಉನ್ನತ ಮಟ್ಟದಲ್ಲಿ ಮಿಲಿಟರಿ ಮಾತುಕತೆಗಳು ಆರಂಭವಾದ ನಂತರ ಈ ದುರ್ಘಟನೆ ನಡೆದಿದೆ. ಉಭಯ ಭಾಗಗಳಿಂದ ಸಾವು-ನೋವುಗಳು ವರದಿಯಾಗಿರುವುದು ಕಳವಳಕಾರಿ ಎಂದಿದ್ದಾರೆ.
ಈ ಸ್ಥಳದಲ್ಲಿ ಎರಡೂ ಕಡೆಯ ಮಿಲಿಟರಿ ಅಧಿಕಾರಿಗಳು ಪರಿಸ್ಥಿತಿಯನ್ನು ಶಮನ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ. ಇದರಿಂದ ಶಾಂತಿಯ ಕೈಮೇಲಾಗುತ್ತದೆ ಎಂಬುದನ್ನು ದೇಶದ ಜನತೆಗೆ ಸ್ಪಷ್ಟವಾಗಿ ತಿಳಿಸಬೇಕು. ಈ ಕುರಿತು ಆಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು ಎಂದಿದ್ದಾರೆ.
ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಗಡಿಯಲ್ಲಿ ಶಾಂತಿ ಹಾಗೂ ಪ್ರಶಾಂತತೆ ಕಾಯ್ದುಕೊಳ್ಳುವ ಬಗ್ಗೆ ಪರಸ್ಪರ ಒಪ್ಪಿಗೆಯಾದ, ತಿಳುವಳಿಕೆಯ ಆಧಾರದಲ್ಲಿ ಘರ್ಷಣೆ ತಪ್ಪಿಸುವ ಪ್ರಕ್ರಿಯೆಯನ್ನು ಮುಂದುವರೆಸಲು ಎರಡೂ ದೇಶಗಳು ತಕ್ಷಣವೇ ಉನ್ನತ ಮಾತುಕತೆ ಆರಂಭಿಸುವುದು ಅಗತ್ಯವಾಗಿದೆ ಎಂದು ಹೇಳಿದೆ,