Saturday, 14th December 2024

ಲಾಕ್‍ಡೌನ್ ಬಳಿಕ ಚಾಮುಂಡೇಶ್ವರಿ- ನಂಜುಂಡೇಶ್ವರನ ದರ್ಶನ ಪಡೆದ ಸಚಿವ ಎಸ್‍ಟಿಎಸ್

ಕರೋನಾ ಮಹಾಮಾರಿಯಿಂದ ನಾಡಿನ ಜನತೆಯನ್ನು ಕಾಪಾಡುವಂತೆ ಪ್ರಾರ್ಥನೆ
ಚಾಮುಂಡೇಶ್ವರಿ ದರ್ಶನಕ್ಕೆ ಆಷಾಢ ಮಾಸದಲ್ಲಿ ಪ್ರವೇಶ ಬಗ್ಗೆ ಚರ್ಚಿಸಿ ನಿರ್ಧಾರ

ಮೈಸೂರು

 

ಕರೋನಾ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಆಗಿ ಪ್ರವೇಶ ನಿಷೇಧಕ್ಕೊಳಪಟ್ಟಿದ್ದ ದೇವಸ್ಥಾನಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ನಾಡಿನ ಸಮಸ್ತ ಜನತೆಯನ್ನು ಕೊರೊನಾ ಎಂಬ ಮಹಾಮಾರಿಯಿಂದ ದೂರ ಮಾಡುವಂತೆ ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ನಂಜುಂಡೇಶ್ವರನಲ್ಲಿ ಪ್ರಾರ್ಥಿಸುವ ಮೂಲಕ ಸರ್ವರಿಗೂ ಒಳಿತನ್ನು ಮಾಡುವಂತೆ ಕೇಳಿಕೊಂಡರು.

ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಆದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿದೆ. ಪೆÇಲೀಸರು ಮಫ್ತಿಯಲ್ಲಿದ್ದು ಗಮನಿಸುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಜನ ಕಾಯುತ್ತಿದ್ದರು. ಆಷಾಢ ಮಾಸದ ಸಂದರ್ಭದಲ್ಲಿ ಏನು ಮಾಡಬಹುದು? ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬಹುದು? ಎಂಬ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಉನ್ನತಾಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಆಷಾಢ ಮಾಸ ಆಚರಣೆಗೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಒಮ್ಮೆಲೆಗೆ 50 ಸಾವಿರದಿಂದ 1 ಲಕ್ಷ ಮಂದಿ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಪ್ರವೇಶಕ್ಕೆ ಅನುಮತಿ ಕೊಡಬೇಕು ಎಂಬ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ. ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇತರೆ ಪ್ರಮುಖರು ಹಾಜರಿದ್ದರು.