Wednesday, 11th December 2024

ಲಾಕ್ ಡೌನ್ ಗೆ ಬಗ್ಗದಿದ್ದರೆ ಬರಲಿದೆ ಸೀಲ್ ಡೌನ್

ಬೆಂಗಳೂರಿನ‌ ಎರಡು ವಾರ್ಡ್ ನಲ್ಲಿ ಸೀಲ್ ಡೌನ್
ಬೆಂಗಳೂರು:
ಜನ ಸಮುದಾಯಕ್ಕೆ ಕರೋನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಹಾಟ್‌ಸ್ಪಾಟ್‌ ಪ್ರದೇಶಗಳನ್ನು ಗುರುತಿಸಿ, ಕ್ಲಾಂಪ್‌ಡೌನ್ (ಸೀಲ್‌ಡೌನ್) ಮಾಡಲು ನಿರ್ಧರಿಸಿದೆ. ಈ ಸ್ಥಳಗಳು ರಾಜ್ಯದ ಇತರ ಪ್ರದೇಶಗಳ ಸಂಪರ್ಕವನ್ನು ಸಂಪೂರ್ಣ ಕಡಿದುಕೊಳ್ಳುತ್ತವೆ.
ರಾಜಸ್ಥಾನದ ಭಿಲ್ವಾಡಾದಲ್ಲಿ ಮೊದಲ ಬಾರಿಗೆ ಹಾಟ್‌ಸ್ಪಾಟ್‌ ಸೀಲ್‌ ಪ್ರಾಯೋಗಿಕವಾಗಿ ಜಾರಿ ಮಾಡಲಾಯಿತು. ಅಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಇತರ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಲು ಮುಂದಾಗಿವೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ 15 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್‌ಗೆ (ಸೀಲ್ಡ್) ಆದೇಶ ಹೊರಡಿಸಿತ್ತು. ಮಧ್ಯಪ್ರದೇಶ ಮತ್ತು ನವದೆಹಲಿಯಲ್ಲಿಯೂ ಜಾರಿಯಾಗಿದೆ. ಒಡಿಶಾ ರಾಜ್ಯದ ಸಚಿವ ಸಂಪುಟ ಏಪ್ರಿಲ್ 30ರವರೆಗೆ ನಿರ್ಬಂಧ ವಿಸ್ತರಣೆಗೆ ತೀರ್ಮಾನಿಸಿತ್ತು. ಇದೀಗ ಕರ್ನಾಟಕದಲ್ಲಿಯೂ ಇಂಥ ಕಠಿಣ ಕ್ರಮಗಳು ಜಾರಿಯಾಗುತ್ತಿವೆ. ಆರಂಭದ ಹೆಜ್ಜೆಯಾಗಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಜಾರಿಗೆ ಚಿಂತನೆ ನಡೆಸಲಾಗಿತ್ತು.
ಆರಂಭದ ಹೆಜ್ಜೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಚಾಮರಾಜಪೇಟೆ ವ್ಯಾಪ್ತಿಯಲ್ಲಿರುವ ಮೈಸೂರು ರಸ್ತೆಯ ಪಾದರಾಯನಪುರ ಮತ್ತು ಬಾಪೂಜಿನಗರ ವಾರ್ಡ್‌ಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣ ಸೀಲ್ಡ್‌ (ಸೀಲ್‌ಡೌನ್) ಮಾಡಲಾಗಿದೆ. ಈ ವಾರ್ಡ್‌ಗಳಿಗೆ ಬೇರೆಡೆಗಳಿಂದ ಯಾರೂ ಬರುವಂತಿಲ್ಲ, ಇಲ್ಲಿರುವವರು ಬೇರೆಡೆಗೆ ಹೋಗುವಂತಿಲ್ಲ.
‘ಸೀಲ್ಡ್’ ಆದೇಶ ವಿವರಗಳನ್ನು ಮಾಧ್ಯಮಗಳಿಗೆ ವಿವರಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ‘ಎರಡೂ ವಾರ್ಡ್‌ಗಳಲ್ಲಿ ಜನರ ಸಂಚಾರ ಮತ್ತು ಸರಕು ಸಾಗಣೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ’ ಎಂದು ಹೇಳಿದರು.
‘ರಸ್ತೆಗಳಿಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಒಂದೇ ಸ್ಥಳವನ್ನು ಗುರುತಿಸಲಾಗಿದೆ. ವಾರ್ಡ್‌ನ ನಿವಾಸಿಗಳೊಂದಿಗೆ ಸಂಪರ್ಕಕ್ಕೆ ಬರುವ ಎಲ್ಲರನ್ನೂ (ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ, ಸಿವಿಲ್ ಡಿಫೆನ್ಸ್) ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ’ ಎಂದು ತಿಳಿಸಿದರು.
’14 ದಿನಗಳ ಅವಧಿಗೆ ಎರಡೂ ವಾರ್ಡ್‌ಗಳಲ್ಲಿರುವವರ ಮನೆಬಾಗಿಲಿಗೆ ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ. ಯಾರೊಬ್ಬರೂ ಮನೆಗಳಿಂದ ಹೊರಗೆ ಬರುವಂತಿಲ್ಲ. ವಾರ್ಡ್‌ಗಳನ್ನು ಬಿಟ್ಟುಹೋಗಲು ಅವಕಾಶ ಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಈ ವಾರ್ಡ್‌ಗಳ ಕೆಲ ನಿವಾಸಿಗಳಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಟ್ಟುನಿಟ್ಟಿನ ಸೀಲ್ಡ್ ಆದೇಶ ಜಾರಿಗೆ ನಿರ್ಧರಿಸಿತು. ಈ ಪ್ರದೇಶದಲ್ಲಿ ಜನಸಾಂದ್ರತೆಯೂ ಹೆಚ್ಚಾಗಿರುವ ಕಾರಣ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.
ಲಾಕ್ ಡೌನ್ ಗಿಂತ ಸೀಲ್ ಡೌನ್ ಪವರ್
‘ಸೀಲ್‌ಡೌನ್‌ ಜಾರಿಗೆ ಬಂದರೆ ಮುಖ್ಯ ರಸ್ತೆ, ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಎಲ್ಲ ಒಳ ರಸ್ತೆಗಳನ್ನು ಬಂದ್ ಮಾಡಲಾಗುವುದು. ಲಾಕ್‌ಡೌನ್ ಇದ್ದಾಗ ಜನರು ಔಷಧಿ, ದಿನಸಿ ಖರೀದಿ, ಹಾಲು, ತರಕಾರಿ ಖರೀದಿ, ಆಸ್ಪತ್ರೆಗೆಂದು ಮನೆಗಳಿಂದ ಹೊರಬರಲು ನಿರ್ದಿಷ್ಟ ಸಮಯದಲ್ಲಿ ಅವಕಾಶ ಇರುತ್ತದೆ. ಆದರೆ ಸೀಲ್ಡ್‌ ಆದೇಶ ಇದ್ದಾಗ ಮನೆಗಳಿಗೇ ಅತ್ಯಗತ್ಯ ವಸ್ತುಗಳನ್ನು ಸರ್ಕಾರ ಪೂರೈಸುತ್ತದೆ. ಜನರು ಮನೆಗಳಿಂದ ಹೊರಗೆ ಬರುವಂತಿಲ್ಲ.
ಸೀಲ್ ಬಿದ್ದಲ್ಲಿ ಹೊರಬಂದರೆ ಬೀಳುತ್ತೆ ಗೂಸಾ
ಅಂಬುಲೆನ್ಸ್‌ ಮತ್ತು ವೈದ್ಯಕೀಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಮನೆಯಿಂದ ಹೊರಗೆ ಜನರು ಬಂದರೆ ಸರಕಾರ ಅಂಥವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ.
ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ ಸೀಲ್ಡ್ ಆದೇಶ ಜಾರಿ ಮಾಡಿದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಶಂಕಿತ ಸೋಂಕಿತರಿಂದ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳಿಸುತ್ತಾರೆ. ಸೋಂಕು ದೃಢಪಟ್ಟವರ ಪ್ರವಾಸ ಇತಿಹಾಸವನ್ನು (ಟ್ರಾವೆಲ್ ಹಿಸ್ಟರಿ) ವಿವರಣಾತ್ಮಕವಾಗಿ ಕಲೆಹಾಕಲಾಗುತ್ತದೆ. ಸೋಂಕಿತರ ಒಡನಾಟಕ್ಕೆ ಬಂದಿದ್ದವರನ್ನು ಗುರುತಿಸಿ, ಪ್ರತ್ಯೇಕಗೊಳಿಸಿ, ಕೈಗಳ ಮೇಲೆ ಸೀಲ್ ಹಾಕಿ ಕ್ವಾರಂಟೈನ್‌ ಮಾಡಲಾಗುತ್ತದೆ.