Wednesday, 11th December 2024

ವಸತಿ ಇಲಾಖೆಯಲ್ಲಿ500 ಕೋಟಿ ರು. ಹಗರಣ ಬೆಳಕಿಗೆ !

 

ರಾಜೀವ್ ಗಾಂಧಿ ನಿಗಮದಿಂದ ತಿರಸ್ಕೃತ ಫಲಾನುಭವಿಗಳಿಗೆ ಹಣದ ಹೊಳೆ, ತಂತ್ರಾಂಶ ದುರ್ಬಳಕೆ

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ವಸತಿ ಇಲಾಖೆಯಲ್ಲಿ ತಿರಸ್ಕೃತವಾದ ಅನರ್ಹ ಫಲಾನುಭವಿಗಳಿಗೂ ತೆರೆಮೆರೆಯಲ್ಲಿ ಹಣ ಬಿಡುಗಡೆ ಮಾಡಿರುವ ಬಹುಕೋಟಿ ರುಪಾಯಿಗಳ ಹಗರಣ ತಡವಾಗಿ ಬೆಳಕಿಗೆ ಬಂದಿದೆ.
ನಿಯಮ ಪಾಲಿಸದೆ ತಿರಸ್ಕಾರವಾಗಿರುವ ಮನೆ ಫಲಾನುಭವಿಗಳಿಗೆ  ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮ ತಂತ್ರಾಂಶವನ್ನೇ ತಿರುಚಿ ಸುಮಾರು 500ಕೋಟಿ ರುಪಾಯಿಗೂ ಹೆಚ್ಚಿನ ಹಣ ನೀಡಿ ಭಾರೀ ಅಕ್ರಮ ಎಸಗಲಾಗಿದೆ. ಈ ಅಕ್ರಮ ಯಾರಿಗೂ ತಿಳಿಯದಂತೆ ನಿಗಮದ ತಂತ್ರಾಂಶದಲ್ಲಿ ದಾಖಲೆಗಳನ್ನು ನಿರ್ವಹಣೆ  ಮಾಡಿರುವುದು ಈಗ ಬಯಲಾಗಿದೆ.
ಈ ಅಕ್ರಮದಲ್ಲಿ ಒಂದೇ ಫಲಾನುಭವಿಗೆ ನಾಲ್ಕು ಬಾರಿ ಹಣ ಪಾವತಿಸಲಾಗಿದೆ. ಮನೆ ವಾಸ್ತವ ಚಿತ್ರಗಳು ಮತ್ತು ನಿವೇಶನದ ಜಿಪಿಎಸ್ ಮಾಡದ ಹಾಗೂ ಮನೆಗಳ ದಾಖಲೆಗಳನ್ನೇ ಅಪ್ ಲೋಡ್ ಮಾಡದವರಿಗೂ ಹಣ ನೀಡಲಾಗಿದೆ. ವಿವಿಧ ಬ್ಯಾಂಕ್ ಅಕೌಂಟ್ ಗಳಿಗೆ ಹಣ ಪಾವತಿಸಿ ಒಬ್ಬರಿಗೇ ಎಲ್ಲಾ ಹಣವೂ ಸಿಗುವಂತೆ ಕೂಡ ಮಾಡಲಾಗಿದೆ.
ಇದರಲ್ಲಿ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿ ಅಕ್ರಮ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಮಧ್ಯವರ್ತಿಗಳು, ಗ್ರಾಮಪಂಚಾಯಿತಿಗಳ ಪಿಡಿಒಗಳೂ, ಇ ಒ ಗಳು ಭಾಗಿಯಾಗಿರುವ ಸಾಧ್ಯತೆ  ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮೂಲಕ ನಿಗಮದಲ್ಲಿ ಸುಮಾರು 1000 ಕೋಟಿ ರುಪಾಯಿಗಳಷ್ಟು ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆಯಿಂದಷ್ಟೇ ಇದೆಲ್ಲವೂ ಬಯಲಾಗಬೇಕಿದೆ ಎಂದು ವಸತಿ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ.
ಏನಿದು ಹಗರಣ ?
ಈ ಬಹುಕೋಟಿ ರುಪಾಯಿಗಳ ಹಗರಣ 2016ರಲ್ಲಿ ಆರಂಭವಾಗಿ 2017 ಮತ್ತು 2018ರ ವರೆಗೂ ನಡೆದಿರಬಹುದು ಎಂದು ದಾಖಲೆಗಳು ಹೇಳುತ್ತವೆ.
2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ  ಸುಮಾರು 4,40ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿತ್ತು. ಅದಕ್ಕಾಗಿ ಸುಮಾರು 2545ಕೋಟಿ ರುಪಾಯಿಗಳನ್ನು ಒದಗಿಸಿತ್ತು. ಆದರೆ ಆ ವರ್ಷ ಮನೆಗಾಗಿ  ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದ ಸುಮಾರು 1ಲಕ್ಷಕ್ಕೂ ಅರ್ಜಿಗಳು ತಿರಸ್ಕಾರವಾಗಿದ್ದವು. ಅದರೂ ಇವರಲ್ಲಿ 30ಸಾವಿರಕ್ಕೂ ಹೆಚ್ಚು ಮಂದಿಗೆ ಅಕ್ರಮವಾಗಿ ಹಣ ಬಿಡುಗಡೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಕ್ಸ್
ಅಕ್ರಮ ಹೇಗೆ ನಡೆದಿದೆ ?
ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿ ಹಂತಹಂತವಾಗಿ ಮನೆ  ನಿರ್ಮಿಸಿ ಪ್ರತಿ ಹಂತದಲ್ಲೂ ಚಿತ್ರ ಸಹಿತ ಜಿಪಿಎಸ್ ಮಾಡಿಸಿ ದಾಖಲೆ ನೀಡಿ ಹಣ ಪಡೆಯಬೇಕು. ಎಲ್ಲಾ ಸರಿಯಾಗಿದ್ದರೆ ಪ್ರತಿ ಶುಕ್ರವಾರ ಫಲಾನುಭವಿಗಳಿಗೆ ಎಫ್ ಟಿಆರ್ ಆಗುತ್ತದೆ. ಆದರೆ
ಅಪ್ ಲೋಡ್ ಮಾಡಿರುವ ವಿವರದಲ್ಲಿ ನಿಯಮ ಪಾಲಿಸದಿದ್ದರೆ ನಿಗಮದ ತಂತ್ರಾಂಶ ಅರ್ಜಿ ದಾರರ ದಾಖಲೆಯನ್ನು ತಿರಸ್ಕರಿಸುತ್ತದೆ.
ಅಂದರೆ ನಿಗಮದ ತಂತ್ರಾಂಶದಲ್ಲಿ ಫಲಾನುಭವಿಗಳ ಕುರಿತು ನಾಟ್ ಒಕೆ ಎಂದು  ತೋರಿಸುತ್ತದೆ.
ಹೀಗೆ ತಿರಸ್ಕಾರವಾಗಿರುವ ಫಲಾನುಭವಿಗಳ ಪರವಾಗಿ ಮಧ್ಯವರ್ತಿಗಳು ಮತ್ತು ಪಿಡಿಒಗಳು ಬಂದು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಕೈ ಬೆಚ್ಚಗೆ ಮಾಡಿ ಹಣ ಮಂಜೂರು ಮಾಡಿಸಿದ್ದಾರೆ ಎಂದು ಹೇಳಲಾಗಿದೆ.
ವಿಚಿತ್ರವೆಂದರೆ, ನಿಗಮದ ತಂತ್ರಾಂಶದಲ್ಲಿರುವ ತಿರಸ್ಕಾರದ ಪಟ್ಟಿಯಲ್ಲಿ ಈಗಲೂ ತಿರಸ್ಕಾರ ಎಂದೇ ಇರುತ್ತದೆ. ಆದರೆ  ಫಲಾನುಭವಿಗಳ ಬ್ಯಾಂಕ್ ವಿವರ ನೋಡಿದರೆ  ಹಣ ಪಾವತಿಯಾಗಿರುವುದು ಪತ್ತೆಯಾಗಿದೆ.
ಇದಕ್ಕೆ ವಿಜಯಪುರದ ನಂದಮ್ಮ ಬೀರಾದಾರ್, ಮುದ್ದೇಬಿಹಾಳದ ಲಾಳಮ್ಮ ನಧಾಫ, ಬೊಮ್ಮನಹಳ್ಳಿಯ ಲಾಲವ್ವ ಸೇರಿದಂತೆ ಸಾವಿರಾರು ಉದಾಹರಣೆಗಳಿವೆ. ಇದರಲ್ಲಿ ಹಣಕಾಸು ವಿಭಾಗದ ವ್ಯವಸ್ಥಾಪಕರು, ಸಿಸ್ಟಮ್ ಅನಾಲಿಸ್ಟ್ ಹಾಗೂ ಇತರ ಸಿಬ್ಬಂದಿ ಭಾಗಿಯಾಗಿರುವ ಸಾಧ್ಯತೆ ಇರುತ್ತದೆ.
ಕೋಟ್
ನೆರವು ಪಡೆದು ಮನೆ ನಿರ್ಮಿಸದ  ಅಕ್ರಮಗಳು ಪತ್ತೆ ಮಾಡಿ ಕ್ರಮ ವಹಿಸಲಾಗಿದೆ.  ಆದರೆ ಈ ರೀತಿ ದಾಖಲೆ ತಿರಸ್ಕಾರವಾದ ಫಲಾನುಭವಿಗಳಿಗೆ ಹಣ ಪಾವತಿಸಿರುವ  ಅಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ.ಈ ಬಗ್ಗೆಕೂಡಲೇ ಕ್ರಮಕೈಗೊಂಡು ಸಮಗ್ರ ತನಿಖೆಗೆ ಸೂಚಿಸುತ್ತೇನೆ.
-ರಾಮ್ ಪ್ರಸಾದ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ