Saturday, 14th December 2024

ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: ಕೊರೋನಾ ಪಾಸಿಟಿವ್ ಇದ್ದ ಮಹಿಳೆಯೊಬ್ಬರು ದಾಖಲಾಗಿದ್ದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಈಗ ಭಯದ ವಾತಾವರಣ ನೆಲಸಿದೆ. ಅಲ್ಲಿಯ ಸ್ನಾತಕೋತ್ತರ ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ತಾವ್ಯಾರು ಕೆಲಸ ಮಾಡೋದಿಲ್ಲ ಎಂದು ಹಠ ಹಿಡಿದಿದ್ದು ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ಕಷ್ಟದ ಸ್ಥಿತಿ ಉಂಟಾಗಿತ್ತು.
ಇದರ ಜತೆಗೆ, ಕೆಲ ಸೋಂಕಿತ ರೋಗಿಗಳನ್ನೂ ಇಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟಾದರೂ ಸಿಬ್ಬಂದಿಗೆ ಸರಿಯಾದ ಪಿಪಿಇ ಕಿಟ್​ಗಳನ್ನು ನೀಡಿಲ್ಲ. ಕೋವಿಡ್ ಅಲ್ಲದ ಮಾಮೂಲಿಯ ಆಸ್ಪತ್ರೆಯಲ್ಲಿ ಬಳಸುವಂಥ ಮಾಸ್ಕ್ ಮತ್ತು ಪಿಪಿಇ ಕಿಟ್​ಗಳನ್ನೂ ತಮಗೆ ನೀಡಿಲ್ಲ. ತಮಗೆ ಸೋಂಕು ತಗುಲಿದರೆ ಏನು ಮಾಡುವುದು? ನಮ್ಮನ್ನು ಕೊರೊನಾ ವಾರಿಯರ್ಸ್ ವಿಮಾ ಯೋಜನೆಗೂ ಸೇರಿಸಿಲ್ಲ. ಆರಂಭದಿಂದಲೂ ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿಲ್ಲ. ಈಗ ಕೊರೋನಾ ಪಾಸಿಟಿವ್ ಬಂದಿದ್ದರೂ ನಮಗೆ ಕೆಲಸ ಮಾಡಲು ಹೇಳುತ್ತಾರೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿಯು ಆಡಳಿತ ಮಂಡಳಿಯ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರೋನಾ ಪಾಸಿಟಿವ್ ಪತ್ತೆಯಾದ ಕೂಡಲೇ ಖಾಸಗಿ ಆಸ್ಪತ್ರೆಯನ್ನೇ ಮುಚ್ಚಿಬಿಡುತ್ತಾರೆ. ಅಂಥದ್ದರಲ್ಲಿ, ಸರಿಯಾದ ಸುರಕ್ಷತಾ ವ್ಯವಸ್ಥೆ ಕೂಡ ಮಾಡದೇ ನಮಗೆ ಕೆಲಸ ಮಾಡಲು ಹೇಳುವುದು ಎಷ್ಟು ಸರಿ ಎಂದು ಇವರು ಪ್ರಶ್ನಿಸಿದ್ದಾರೆ.
 ವಾಣಿ ವಿಲಾಸ ಆಸ್ಪತ್ರೆಯ ಸಮೀಪದಲ್ಲೇ ಇರುವ ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟವ್ ಬಂದಿದ್ದ ಮಹಿಳೆಯೊಬ್ಬರು ಓಡಾಡಿದ ಕಾರಣಕ್ಕೆ ಮುಚ್ಚಲಾಗಿದೆ. ಅಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದರೆ, ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲೊಂದೆನಿಸಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೊರೋನಾದಂಥ ಗಂಭೀರ ಪ್ರಕರಣಗಳಲ್ಲಿ ಇಷ್ಟು ನಿರ್ಲಕ್ಷ್ಯತೆ ತೋರುತ್ತಿರುವುದು ಎಷ್ಟು ಸರಿ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ.
 ಪಾದರಾಯನಪುರ ನಿವಾಸಿ ಹಾಗೂ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಕೆಆರ್ ಮಾರುಕಟ್ಟೆ ಬಳಿ ಇರುವ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಸ್ಯಾಂಪಲ್ ಪರೀಕ್ಷೆ ಮಾಡಿದಾಗ ಕರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಫಲಿತಾಂಶ ಬಂದ ಕೂಡಲೇ ಆಕೆಯನ್ನು ಪಕ್ಕದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆ ಮಹಿಳೆಯ ಅನೇಕ ಸಂಬಂಧಿಕರು ಆಸ್ಪತ್ರೆಯೆಲ್ಲೆಡೆ ಓಡಾಟ ನಡೆಸಿದ್ದರು. ಇದು ಆಸ್ಪತ್ರೆಯ ಸಿಬ್ಬಂದಿಗೆ ಭೀತ ಸೃಷ್ಟಿಸಿದೆ.
……..
ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್
ಗರ್ಭಿಣಿಯೊಬ್ಬರಿಗೆ ಕರೋನಾ ಪಾಸಿಟಿವ್ ಬಂದ ಕಾರಣ ಆತಂಕ ಸೃಷ್ಟಿಯಾಗಿತ್ತು. ಈಗಾಗಲೇ ವಾಣಿ ವಿಲಾಸ ಆಸ್ಪತ್ರೆ ಆಡಳಿತ ಮಂಡಳಿ ಜತೆ ಮಾತನಾಡಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ವಾಣಿ ವಿಲಾಸ ನಾನ್ ಕೋವಿಡ್ ಆಸ್ಪತ್ರೆ ಆಗಿದ್ದರಿಂದ ಪಿಪಿಇ ಕಿಟ್ ಇರಲಿಲ್ಲ  ಸತ್ಯ. ಇದರಿಂದಾಗಿ ಆತಂಕಗೊಂಡು ಸ್ವಲ್ಪ ತ್ರಾಸವಾಗಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ನಾನ್ ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಗಳನ್ನು ಒದಗಿಸುತ್ತೇವೆ. ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ. ವೈದ್ಯರು, ನರ್ಸ್​ಗಳು, ವೈದ್ಯ ವಿದ್ಯಾರ್ಥಿಗಳು ಯಾರೂ ಗಾಬರಿ ಪಡಬೇಕಿಲ್ಲ. ಸರಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಧೈರ್ಯ ಹೇಳಿದ್ದಾರೆ‌