Saturday, 14th December 2024

ವಿಕಾಸಸೌಧಕ್ಕೂ ಕಾಲಿಟ್ಟ ಕರೋನಾ

ಬೆಂಗಳೂರು: 
ಮಾರಕ ಕರೋನಾ ವೈರಸ್ ಆರ್ಭಟ ಮುಂದುವರಿದಿದ್ದು, ಇದೀಗ ವಿಕಾಸ ಸೌಧ ಹಾಗೂ ಶಕ್ತಿಸೌಧ ವಿಧಾನಸೌಧದ ಸಿಬ್ಬಂದಿಗಳಿಗೂ ಕರೋನಾ ಸೋಂಕು ಕಾಣಿಸಿಕೊಂಡಿದೆ.
ಮೂಲಗಳ ಪ್ರಕಾರ ವಿಕಾಸಸೌಧದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಮಹಿಳೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಅದರ ವರದಿ ಪಾಸಿಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಮಹಿಳಾ ಸಿಬ್ಬಂದಿ ಓಡಾಡಿದ್ದ ವಿಕಾಸ ಸೌಧದ 4 ಕೊಠಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಂತೆಯೇ ಮಹಿಳೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಸೋಂಕು ಶಂಕಿತ ಮಹಿಳೆ ವಿಧಾನಸೌಧಕ್ಕೂ ಆಗಮಿಸಿದ್ದ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ಮಹಿಳೆ ಕಾರ್ಯನಿರ್ವಹಿಸಿದ್ದ ಆಹಾರ ಇಲಾಖೆ ಕಚೇರಿ ಸೇರಿದಂತೆ ಅನೇಕ ಪ್ರಮುಖ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಮಹಿಳಾ ಸಿಬ್ಬಂದಿಗೆ ಕರೋನಾ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಇಡೀ ವಿಕಾಸಸೌಧ ಹಾಗೂ ಶಕ್ತಿಸೌಧದ ಸಿಬ್ಬಂದಿಗಳು ಕರೋನಾ ಆತಂಕಕ್ಕೆ ಒಳಗಾಗಿದ್ದಾರೆ.