Friday, 13th December 2024

ವಿದೇಶಗಳಲ್ಲಿ ಸಿಲುಕಿರುವವರ ಕರೆತರಲು ಕೇಂದ್ರ ಸರಕಾರ ಸಿದ್ಧತೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು: 

ವಿದೇಶಗಳಲ್ಲಿ ಸಿಲುಕಿರುವ ರಾಜ್ಯದ 10,823 ಮಂದಿಯನ್ನು ಕರೆತರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದ್ದು ಮೊದಲ ಹಂತದಲ್ಲಿ 6,100 ಮಂದಿ ಆಗಮಿಸಲಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಕ್ರಮಕೈಗೊಂಡಿದೆ. ಈ ಪೈಕಿ 10,823 ಕನ್ನಡಿಗರು ರಾಜ್ಯಕ್ಕೆ ಮರಳಲಿದ್ದು, ಈ ಕುರಿತು ಶೀಘ್ರದಲ್ಲಿಯೇ ದಿನಾಂಕ ನಿಗದಿಯಾಗಲಿದೆ. ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಅವರನ್ನು ಕ್ವಾರಂಟೈನ್ ಮಾಡಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಲು ರಾಜ್ಯ ಸರಕಾರ ಸಿದ್ಧತೆ ಮಾಡಿದೆ. ವಿದೇಶದಲ್ಲಿರುವ ರಾಜ್ಯದ 10,823 ಮಂದಿ ಪೈಕಿ 4,408 ಮಂದಿ ಪ್ರವಾಸಕ್ಕೆ, 3,074 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ, 2,784 ಮಂದಿ ವೃತ್ತಿಜೀವನ ಅರಸಿ, 557 ಹಡಗಿನ ಸಿಬ್ಬಂದಿಯಾಗಿ ವಿದೇಶಕ್ಕೆ ತೆರಳಿದ್ದರು ಎಂದು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಕೆನಡಾದಿಂದ 328, ಯುಎಸ್‍ಎಯಿಂದ 927, ಯುಎಇ 2,575, ಖತಾರ್ – 414, ಸೌದಿ ಅರೇಬಿಯಾದಿಂದ 927 ಮಂದಿ ಸೇರಿ 6,100 ಮಂದಿ ಕರೆತರಲು ನಿಗದಿ ಪಡಿಸಲಾಗಿದೆ, ಇವರೆಲ್ಲರನ್ನೂ ಸರಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳಲ್ಲಿ ಸಾಮೂಹಿಕ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು. 28 ದಿನಗಳ ಪರಿಶೀಲನೆ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿ ಮನೆಗಳಿಗೆ ಕಳುಹಿಸಲು ಕಾರ್ಯಯೋಜನೆ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಡುಗಡೆಯಾದವರು ಹೆಚ್ಚು
ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 61 ಮಂದಿ ಸೋಂಕಿತರಾದರೆ 64 ಮಂದಿ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಬೆಳವಣಿಗೆ ದರ ಶೇ.1.2ರಷ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ.  ಸದ್ಯ ರಾಜ್ಯದ ಸೋಂಕಿತ ಪ್ರಕರಣಗಳನ್ನು ಆಧಾರಿಸಿ ರಾಜ್ಯದಲ್ಲಿ ಒಟ್ಟು 123 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ  445 ಮಂದಿ ಸೋಂಕಿತು ಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ ಒಟ್ಟು 73,970 ಮನೆಗಳಿದ್ದು ಒಟ್ಟಾರೆ 4,12,278 ಮಂದಿ ವಾಸುತ್ತಿದ್ದಾರೆ. ಇನ್ನು 5,961 ವಾಣಿಜ್ಯ ಮಳಿಗೆಗಳು ಹಾಗೂ ಸರಕಾರ ಕಚೇರಿಗಳಿವೆ.  ಬಫರ್ ಝೋನ್‍ಗಳಲ್ಲಿ 8,67,414ಮನೆಗಳಿದ್ದು, 38,37,779 ಮಂದಿ ವಾಸಿಸುತ್ತಿದ್ದಾರೆ.  69,501 ವಾಣಿಜ್ಯ ಮಳಿಗೆಗಳು ಹಾಗೂ ಸರ್ಕಾರಿ ಕಚೇರಿಗಳಿವೆ ಎಂದು ಮಾಹಿತಿ ನೀಡಿದರು.