Friday, 13th December 2024

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಸ್ಥಳಾಂತರ ಗ್ರಾಮಗಳ ಉಳಿದವರಿಗೂ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ : ಸಚಿವ ಸಿ.ಸಿ.ಪಾಟೀಲ

ಗದಗ

ರಾಜ್ಯ ಸರಕಾರ ಹೊಳೆಮಣ್ಣೂರು ಗ್ರಾಮದ ಪ್ರವಾಹ ಪೀಡಿತ ಕುಟುಂಬಗಳಿಗೆ ಈಗಾಗಲೇ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ. ಗ್ರಾಮದ ಬಾಗಶಃ ಕುಟುಂಬಗಳಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಭರವಸೆ ನೀಡಿದರು.

ರೋಣ ತಾಲ್ಲೂಕಿನ ನರಗುಂದ ಮತಕ್ಷೇತ್ರದ ಹೊಳೆ ಮಣ್ಣೂರು ಗ್ರಾಮದಲ್ಲಿ (ಜೂನ್ 16) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು. 2007 ಮತ್ತು 2009 ರಲ್ಲಿ ಸರ್ಕಾರ ಹೊಳೆ ಮಣ್ಣೂರು ಗ್ರಾಮದ ನೆರೆ ಸಂತ್ರಸ್ತರ ಪುನರ್ವಸತಿಗಾಗಿ 612 ಹೊಸ ಮನೆಗಳನ್ನು ನಿರ್ಮಿಸಿದ್ದು, ಈಗಾಗಲೇ ಶೇ.80 ರಷ್ಟು ಕುಟುಂಬಗಳಿಗೆ ಮನೆ ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ವಿತರಿಸಿದೆ. ಗ್ರಾಮಸ್ಥರ ಸಹಕಾರದೊಂದಿಗೆ 2009ರಲ್ಲಿ ಸಿದ್ದಪಡಿಸಿ ಹಂಚಿಕೆ ಮಾಡಲಾದ ಪಟ್ಟಿಯನ್ನೇ ಅಂತಿಮಗೊಳಿಸಿ ಆದಷ್ಟು ಬೇಗ ಉಳಿದ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ಹೊಳೆ ಮಣ್ಣೂರ ಗ್ರಾಮ ಪಂಚಾಯತಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 32 ಲಕ್ಣ ರೂ. ಸರ್ಕಾರದಿಂದ 20 ಲಕ್ಷ ರೂ. ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ 18.50 ಲಕ್ಷ ಅನುದಾನ ಸೇರಿ ಒಟ್ಟು 70.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದರಂತೆ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಗಟಾರು ನಿರ್ಮಾಣಕ್ಕಾಗಿ 30 ಲಕ್ಷ ರೂ., ರಂಗಮಂದಿರಕ್ಕಾಗಿ 15 ಲಕ್ಷ ರೂ., ಸೌರ ಬೆಳಕು, ಟೆಲಿವಿಷನ್ ಅಳವಡಿಕೆಗಾಗಿ 23 ಲಕ್ಷ ರೂ. ಹೀಗೆ ಒಟ್ಟು 138.50 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಅಲ್ಲದೇ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗಾಗಿ ನಬಾರ್ಡ್-25 ಯೋಜನೆ ಹಾಗೂ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾಪೋರೇಶನ್ ಲಿಮಿಟೆಡ್ ಸಹಯೋಗದಲ್ಲಿ 98 ಲಕ್ಷ ರೂ. ವೆಚ್ಚದಲ್ಲಿ 4 ಹೆಚ್ಚುವರಿ ಸೇರಿ ಒಟ್ಟು 9 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಗಾಡಗೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಬಾರ್ಡ್-25 ಯೋಜನೆಯಡಿ 72 ಲಕ್ಷ ರೂ. ವೆಚ್ಚದಲ್ಲಿ 6 ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವರಾದ ಸಿ.ಸಿ.ಪಾಟೀಲ್ ಅವರು, ಲಾಕ್ ಡೌನ್ ಸಡಿಲಿಕೆಯ ನಂತರ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ನಿರ್ವಹಿಸಿದಲ್ಲಿ ಅಥವಾ ಕಾಮಗಾರಿ ಕಳಪೆ ಎಂದು ಕಂಡುಬಂದಲ್ಲಿ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಚಿವರು ತಿಳಿಸಿದರು.

ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಜೊತೆ ಚೆಲ್ಲಾಟವಾಡದೇ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ನಿರ್ಲಕ್ಷಿಸದೆ ಸಮೀಪದ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಕೋವಿಡ್-19 ಸೋಂಕು ಕುರಿತು ಭಯಬೇಡ ಜಾಗೃತಿ ಇರಲಿ. ಕೋವಿಡ್ ಸೋಂಕಿನ ಜೊತೆ ಜೊತೆಗೆ ಜೀನವ ನಡೆಸುವುದು ಇಂದಿನ ಅನಿವಾರ್ಯತೆಯಾಗಿದೆ. ಗ್ರಾಮಸ್ಥರು ಕೊರೋನಾ ಕುರಿತು ಅರಿವು ಹೊಂದಬೇಕು. ಸಾರ್ವಜನಿಕ ಸ್ಥಳಗಳು ಸೇರಿದಂತೆ ಹಲವೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಕೊರೋನಾ ನಿಯಂತ್ರಣ ಮಾಡಬೇಕು ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ (ಕೆಎಸ್‍ಸಿಸಿಎಫ್) ಅಧ್ಯಕ್ಷ ಜಿ.ಪಿ.ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್ ನೀಲಗುಂದ, ಪಡಿಯಪ್ಪ ಪೂಜಾರ, ರೋಣ ತಹಶೀಲ್ದಾರ ಜಕ್ಕನಗೌಡರ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಂತೋಷ ಪಾಟೀಲ, ಪಿಡಿಒ ರಿಯಾಜ್ ನದಾಫ್, ವಿ.ಜಿ.ಮುಲ್ಕಿಪಾಟೀಲ್, ಗಿರೀಶ್ ಚನ್ನಪ್ಪಗೌಡರ, ತಾಪಂ ಅಧ್ಯಕ್ಷರು, ಸದಸ್ಯರು, ಗ್ರಾಪಂ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.