Friday, 13th December 2024

ವಿಶೇಷ ಚೇತನ ಮಕ್ಕಳಿಗೆ ದೈನಂದಿನ ಸಾಮಗ್ರಿ ವಿತರಣೆ

ಧಾರವಾಡ:

ಸಪ್ತಾಪೂರ ಎಸ್‍ಆರ್ರ್‍ಪಿ ಕೇಂದ್ರದಲ್ಲಿ ಶಾಲೆ ಫೋರ್ತ್‍ವೇವ್ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳು ಹಾಗೂ ಪಾಲಕರಿಗೆ ಆಹಾರಧಾನ್ಯ ಹಾಗೂ ವಿಶೇಷ ದೈನಂದಿನ ಉಪಯೋಗಿ ಸಾಮಗ್ರಿಗಳಿರುವ ಒಟ್ಟು 25 ಸಾಮಗ್ರಿಗಳಿರುವ ಕಿಟ್ ವಿತರಣಾ ಕಾರ್ಯ ನಡೆಯಿತು.

ಕಿಟ್ ವಿತರಣೆ ಮಾಡಿ ಮಾತನಾಡಿದ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿಯವರು, ಕೊರೋನಾ ಕಾಯಿಲೆಗೆ ಹೆದರುವ ಅವಶ್ಯಕತೆ ಇಲ್ಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಇದೆ. ಪೋರ್ತ್‍ವೇವ್ ಪೌಂಢೇಶನ್ ರವರ ಈ ಸಮಾಜಮುಖಿ ಕಾರ್ಯ ಶ್ಲಾಘನೀಯ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಇಲಾಖೆ ಸದಾ ಕೈ ಜೋಡಿಸುತ್ತದೆ ಎಂದು ಹೇಳಿದರು.

ವಿಕಲಚೇತನರ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ಮುತ್ತಣ್ಣ ಮಾತನಾಡಿ, ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರದ ಅವಶ್ಯಕತೆ ಹಾಗೂ ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯದ ಬಗ್ಗೆ ಗಮನ ಹರಿಸಲು ಸೂಚಿಸಿದರು.

ವಿಶೇಷ ಚೇತನ ಮಕ್ಕಳಿಗೆ ಪೌಷ್ಠಿಕಾಂಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪಾಲಕರಿಗೆ ಸಹಾಯ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸೇವೆ ನೀಡುವ ಕಾರ್ಯಕ್ರಮ ಇದಾಗಿದೆ. ಸಿಆರ್‍ಪಿ ಎಸ್.ಎನ್. ಇದಿಯಮ್ಮನವರ, ಐಇಆರ್‍ಟಿರವರಾದ ಸುಮಿತ್ರಾ ಹಿರೇಮಠ, ಗಿರಿಜಾ ಪಾಟೀಲ್, ಎಂ.ಪಿ. ದೊಡ್ಡಮನಿ, ಎಸ್.ಎಸ್. ಜೋಶಿ, ಎಂ.ಆರ್. ಕಬ್ಬೇರ, ಎ.ಎಂ. ದೊಡ್ಡಮನಿ, ಹಾಜಿರಾ, ನಿರ್ಮಲಾ ಹಾಗೂ ಕಾರ್ಯಕ್ರಮ ಸಂಯೋಜಕರಾದ ಬಸವರಾಜ ಮ್ಯಾಗೇರಿ ಸೇರಿದಂತೆ 50 ಜನ ವಿಶೇಷ ಚೇತನ ಮಕ್ಕಳ ಪಾಲಕರು ಹಾಜರಿದ್ದರು.