Friday, 13th December 2024

ವಿಶ್ವದಾದ್ಯಂತ ಕರೋನಾಗೆ 2.82 ಲಕ್ಷ ಮಂದಿ ಸಾವು

ಪ್ಯಾರಿಸ್:

ಮಹಾಮಾರಿ ಕರೋನಾ ಇಡೀ ವಿಶ್ವವನ್ನು ವ್ಯಾಪಿಸಿದ್ದು, ವಿಷವರ್ತುಲ ಆವರಿಸಿ ಭಯ ಭೀತಿಯ ವಾತಾವರಣ
ಸೃಷ್ಟಿಯಾಗಿರುವಾಗಲೇ ಸೋಂಕು ಮತ್ತು ಸಾವು ಪ್ರಕರಣಗಳ ಸಂಖ್ಯೆಯೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಪ್ರಪಂಚದಾದ್ಯಂತ ಈವರೆಗೆ 2,82,894 ಸಾವು ಮತ್ತು 41.52 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ.
ವಿಶ್ವವ್ಯಾಪಿ ಸಾವಿನ ಸಂಖ್ಯೆ 3 ಲಕ್ಷಕ್ಕೇರುವ ಆತಂಕವಿರುವಾಗಲೇ ಸುಮಾರು 14 ಲಕ್ಷ ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕರೋನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ  ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 45 ಲಕ್ಷ ದಾಟುವ ಆತಂಕವಿದೆ.

ಕರೋನಾ ವೈರಸ್‌ಗೆ ಅಂಕುಶ ಹಾಕಲು ವಿಶ್ವದ ಎಲ್ಲ ದೇಶಗಳು ಒಗ್ಗೂಡಿ ಓಡಾಡುತ್ತಿದ್ದರೂ, ಮಹಾಮಾರಿ ರೌದ್ರಾವತಾರ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಪ್ರಪಂಚದ 250ಕ್ಕೂ ಹೆಚ್ಚು ದೇಶಗಳು ಕರೋನಾ  ಅಟ್ಟಹಾಸಕ್ಕೆ ಕಂಗೆಟ್ಟಿವೆ.
ವಿಶ್ವದಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಮರಣ ಪ್ರಮಾಣ ಮತ್ತಷ್ಟು ವೃದ್ಧಿಯಾಗುವ ಆತಂಕವಿದೆ.

ಅಮೆರಿಕ, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಕರೋನಾ ದಾಳಿಯಿಂದ ತತ್ತರಿಸುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಇಡೀ ವಿಶ್ವದ ಜನರ ಕಾಡುತ್ತಿದೆ. ಮತ್ತೊೊಂದೆಡೆ ಕರೋನಾ ನಿಗ್ರಹಕ್ಕಾಗಿ ಅನೇಕ ದೇಶಗಳ ವೈದ್ಯಕೀಯ ಸಮುದಾಯ ಸಂಶೋಧನೆ ಮತ್ತು ಅನ್ವೇಷಣೆಯನ್ನು ನಿರಂತರವಾಗಿ ಮುಂದುವರಿಸಿದೆ.