ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಶಾಲೆಗಳ ಪುನಾರಂಭ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಚಿಂತನೆ ನಡೆಸಿದ್ದು, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರ ಪ್ರಕಾರ ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭ ಮಾಡುವ ಕುರಿತು ವರದಿ ನೀಡಲು ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದ್ದಾರೆ.
ಶಾಲೆ ಪುನಾರಂಭ ಕುರಿತು ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಿದ್ದು, ಜೂ.12 ರ ಒಳಗೆ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಶಾಲೆಗಳನ್ನು ಪುನಾರಂಭ ಮಾಡಬಹುದಾದ ದಿನಾಂಕದ ಬಗ್ಗೆ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನದ ಬಗ್ಗೆ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಹಾಗೂ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಶಾಲಾ ಪುನಾರಂಭದ ಬಗ್ಗೆ ದಿನಾಂಕ ಸ್ಪಷ್ಟನೆ ಸಿಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನದಂತೆ ಕೇಂದ್ರದ ಮಾರ್ಗಸೂಚಿಯ ಆಧಾರದಲ್ಲಿ ಜುಲೈ 1 ರಿಂದ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಪೋಷಕರ ಅಭಿಪ್ರಾಯ ಸಂಗ್ರಹಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ. 5.6.2020 ರಿಂದಲೇ ರಾಜ್ಯದ ಎಲ್ಲ ಸರಕಾರಿ ಶಾಲೆಗಳು ಅಲ್ಲಿನ ಕಚೇರಿ ಸಿಬ್ಬಂದಿ ಸಂಬಂಧಿಸಿದ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ, 8.6.2020ರಿಂದ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಿದ್ದಾರೆ.
ಶೈಕ್ಷಣಿಕ ತಯಾರಿಗೆ ಜೂನ್ ತಿಂಗಳನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳ ಪರಿಸ್ಥಿತಿಯ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಕಾರದ ಕಾಲಕಾಲಿಕ ನಿರ್ದೇಶನದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ. 8.6.2020ರಿಂದ ಖಾಸಗಿ ಅನುದಾನರಹಿತ ಶಾಲಾ ಕಛೇರಿಗಳ ಪ್ರಾಾರಂಭಕ್ಕೂ ಅನುಮತಿಸಿ ಆದೇಶ ಹೊರಡಿಸಲಾಗಿದ್ದು, ಪೋಷಕರ ಅಭಿಪ್ರಾಯವನ್ನು ಜೂನ್ 15 ರೊಳಗೆ ಎಸ್‌ಎಟಿಯಲ್ಲಿ ದಾಖಲಿಸಲು ಸೂಚಿಸಲಾಗಿದೆ ಎಂದು ಸಚಿವರ ಕಚೇರಿ ತಿಳಿಸಿದೆ.ಈ ಮಧ್ಯೆೆ ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್‌ನಲ್ಲಿ ಶಾಲೆ ಆರಂಭದ ವಿರುದ್ಧ ಅಭಿಯಾನ ಆರಂಭಗೊಂಡಿದ್ದು, ಬಹುತೇಕ ಪೋಷಕರು ಪ್ರಾಥಮಿಕ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.