ಬೆಂಗಳೂರು
ಯಾವುದೇ ಪ್ರದೇಶದಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆಯು ‘ಪೂಲ್ ಸ್ಯಾಂಪಲ್ ಟೆಸ್ಟಿಂಗ್’ ಮೊರೆ ಹೋಗಿದ್ದು, ಐದು ವ್ಯಕ್ತಿಗಳ ಸ್ವ್ಯಾಬ್ ಮಾದರಿಯನ್ನು ಒಂದೇ ಸ್ಟೆರೈಲ್ ಟ್ಯೂಬ್‌ನಲ್ಲಿ ಸಂಗ್ರಹಿಸಿ ಸಾಮೂಹಿಕ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.
ಈ ವೇಳೆ ಪೂಲ್ ಮಾದರಿ ಕರೋನಾ ಸೋಂಕು ಪಾಸಿಟಿವ್ ಬಂದರೆ ಐದು ಮಂದಿಯನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು. ಪೂಲ್ ಮಾದರಿ ನೆಗೆಟಿವ್ ಬಂದರೆ ೫ ಮಂದಿಯಲ್ಲಿ ಯಾರಿಗೂ ಸೋಂಕು ತಗುಲಿಲ್ಲ ಎಂಬ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬರಲಿದೆ.
ಐಸಿಎಂಆರ್ ಮಾರ್ಗಸೂಚಿ ಅನ್ವಯ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆಯು, ಹೆಚ್ಚೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲು ಐಸಿಎಂಆರ್ ಪೂಲ್ ಟೆಸ್ಟಿಂಗ್‌ಗೆ ಆದ್ಯತೆ ನೀಡಲು ತಿಳಿಸಿದೆ. ಇದರಂತೆ ಪೂಲ್ ಮಾದರಿ ಸಂಗ್ರಹಿಸುವ ವೇಳೆ ಸೋಂಕಿನ ಲಕ್ಷಣಗಳು ಉಳ್ಳವರ ಮಾದರಿ ಸಂಗ್ರಹಿಸಬಾರದು.
ಅಲ್ಲದೆ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರು, ಆರೋಗ್ಯ ಸಿಬ್ಬಂದಿ ಹಾಗೂ ಶೇ.೫ಕ್ಕಿಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ದರ (ಪರೀಕ್ಷಿಸಿದವರಲ್ಲಿ ಶೇ.೫ಕ್ಕಿಂತ ಹೆಚ್ಚು ಪಾಸಿಟಿವ್) ಹೊಂದಿರುವ ಕಂಟೈನ್‌ಮೆಂಟ್ ಪ್ರದೇಶದಲ್ಲಿ ಈ ಮಾದರಿಯಲ್ಲಿ ಮಾದರಿ ಪರೀಕ್ಷೆ ಮಾಡಬಾರದು.
ಶೇ.೨ ರಿಂದ ಶೇ.೫ ರ ನಡುವೆ ಪಾಸಿಟಿವಿಟಿ ದರ ಇರುವ ಪ್ರದೇಶದಲ್ಲಿ ೫ ಮಂದಿಯ ಗಂಟಲು ದ್ರಾವಣವನ್ನು ಒಂದು ಸ್ಟೆರೈಲ್ ಟ್ಯೂಬ್‌ನಲ್ಲಿ ಸಂಗ್ರಹಿಸಿ ಚೆನ್ನಾಗಿ ಕುಲಿಕಿ ಪೂಲ್ ಮಾದರಿ ಪರೀಕ್ಷೆಗೆ ಒಳಪಡಿಸಲಾಗುವುದು. ಹೀಗಾಗಿ ಮಾದರಿ ಸಂಗ್ರಹಿಸುವ ವೇಳೆ ೫ ಮಂದಿಯ ವಿವರಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಈ ಪೂಲ್ ಮಾದರಿಯಲ್ಲಿ ಸೋಂಕು ದೃಢಪಟ್ಟರೆ ೫ ಮಂದಿಯನ್ನೂ ಪತ್ತೆ ಹಚ್ಚಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕು. ಈ ರೀತಿ ಪ್ರತಿ ೫ ಮಂದಿಗೆ ಒಂದು ಪರೀಕ್ಷೆಯಂತೆ ಪೂಲ್ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ.