Saturday, 14th December 2024

ಸಿಲಿಕಾನ್ ಸಿಟಿಯಲ್ಲಿ ಸಹೋದರರ ಜೋಡಿ ಕೊಲೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಸಹೋದರರಿಬ್ಬರನ್ನು ಬರ್ಬರವಾಗಿ ಹತ್ಯೆೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿವೆ.

ಕಲ್ಯಾಣನಗರದ ಸಹದೇವ (27) ಹಾಗೂ ರಘುಸ್ವಾಮಿ (29) ಕೊಲೆಯಾದವರು. ಮೃತರು ಕಟ್ಟಡ ನಿರ್ಮಾಣದ ಕಾರ್ಮಿಕರಾಗಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲೇ ಅವರಿಬ್ಬರನ್ನು ಕೊಲೆ ಮಾಡಲಾಗಿದ್ದು, ಅಣ್ಣನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಟ್ಟಡದ ಕೊಠಡಿಯೊಂದರಲ್ಲಿ ಸಹದೇವ್, ರಘುಸ್ವಾಮಿ ಹಾಗೂ ಅವರ ಅಣ್ಣ ತಂಗಿದ್ದರು.  ಕಳೆದ ಎರಡು ದಿನಗಳ ಹಿಂದೆ ಸಹೋದರರ ನಡುವೆ ಜಗಳವಾಗಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು  ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರು  ಸಹೋದರರ ಮೇಲೆ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದ್ದು, ಕುಡಿದ ನಶೆಯಲ್ಲಿ ಜಗಳ ಆಗಿರುವ ಸಾಧ್ಯತೆ ಇದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು,  ವೈದ್ಯಕೀಯ ವರದಿ ಬಂದ ನಂತರವೇ ಕೊಲೆಗೆ ನಿಖರ ಕಾರಣ  ತಿಳಿದು ಬರಲಿದೆ.

ಮೃತರ ಸಂಬಂಧಿಕರು ನೀಡಿರುವ ದೂರಿನ ಅನ್ವಯ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.  ಸದ್ಯ ಮೃತರ ಅಣ್ಣ ನಾಪತ್ತೆೆಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ. ಅಲ್ಲದೇ, ವಿವಿಧ  ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.