Saturday, 14th December 2024

ಸ್ಯಾನಿಟೈಸರ್ ಖರೀದಿಯಲ್ಲೂ ಅಕ್ರಮ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್‌ಹೌಸಿಂಗ್ ಸೊಸೈಟಿ  (ಕೆಡಿಎಲ್‌ಡಬ್ಲ್ಯುಎಸ್) ದೋಷಪೂರಿತ ವೈಯಕ್ತಿಕ ರಕ್ಷಣ ಸಾಧನಗಳು (ಪಿಪಿಇ ಕಿಟ್) ಖರೀದಿಸಿದ್ದ ಬೆನ್ನಲ್ಲೇ ಇದೀಗ ಸ್ಯಾನಿಟೈಸರ್ ಖರೀದಿಯಲ್ಲೂ ಅಕ್ರಮ ವಾಸನೆ ಬಡಿದಿದೆ.  500 ಎಂಎಲ್  ಸ್ಯಾನಿಟೈಸರ್ ಬಾಟಲ್‌ಗೆ 97.44 ರೂ. ಬದಲು ಸಂಸ್ಥೆಯ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಕಮಿಷನ್ ಪಡೆದು ನಿಯಮಬಾಹಿರವಾಗಿ 250 ರೂ.ನಂತೆ ಐದು ಕಂಪನಿಗಳಿಗೆ 19 ಕೋಟಿ ರೂ. ಮೊತ್ತದ ಹ್ಯಾಂಡ್ ಸ್ಯಾನಿಟೈಸರ್ ಸರಬರಾಜು ಮಾಡಲು ಖರೀದಿ ಆದೇಶ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಅಕ್ರಮ ಹೇಗೆ?
2019ರ ಅ.19ರಂದು ಎರಡು ವರ್ಷ ಕಾಲಾವಧಿಗೆ  ಹ್ಯಾಂಡ್ ಸ್ಯಾನಿಟೈಸರ್ ಖರೀದಿ ಸಂಬಂಧ ಕೆಡಿಎಲ್‌ಡಬ್ಲ್ಯುಎಸ್ ಟೆಂಡರ್ ಕರೆದಿತ್ತು. ನ.18ರಂದು ಟೆಂಡರ್ ಸಂಬಂಧ ದಾಖಲೆ ಸಲ್ಲಿಸಲಾಗಿತು.  ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಯೊಂದು  97.44 ರೂ.ದರ ನಮೂದಿಸಿ ಎಲ್-1 ಸ್ಥಿತಿ ಪಡೆದಿತ್ತು. ಅದರೀತಿ ಮತ್ತೊಂದು ಕಂಪನಿ 99 ರೂ. ದರ  ನಮೂದಿಸಿದ್ದರಿಂದ ಎಲ್-2 ಸ್ಥಿತಿ ಹೊಂದಿತ್ತು. ಎಲ್-1 ಸ್ಥಿತಿ ಹೊಂದಿದ್ದ ಕಂಪನಿ ಕಳೆದ ೆ.20ರಂದು ದರ ಕಾರರು ಪತ್ರ ಸಲ್ಲಿಸಿ 15 ತಿಂಗಳ ಅವಧಿಗೆ ಸ್ಯಾನಿಟೈಸರ್ ಪೂರೈಸಲು ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಅವಧಿಯಲ್ಲಿ ಟೆಂಡರ್ ನಿಯಮಾನುಸಾರ ಬೇಡಿಕೆ ಅನುಗುಣವಾಗಿ ಕೆಡಿಎಲ್‌ಡಬ್ಲ್ಯುಎಸ್ ಎಷ್ಟು ಪ್ರಮಾಣದಲ್ಲಿ  ಖರೀದಿ ಆದೇಶ ನೀಡಿದ್ದರೂ ಆ ಕಂಪನಿ ದರ ಗುತ್ತಿಗೆ ಅನ್ವಯ ಹ್ಯಾಂಡ್ ಸ್ಯಾನಿಟೈಸರ್ ಸರಬರಾಜು ಮಾಡಬೇಕಿತ್ತು. ಆದರೆ, ಸಂಸ್ಥೆಯ ಕೆಲ ಅಧಿಕಾರಿಗಳು ಕೋಟಿಗಟ್ಟಲೆ ಕಮಿಷನ್ ಹಣ ಪಡೆದು ಪ್ರತಿ ಬಾಟಲ್‌ಗೆ 250 ರೂ.ನಂತೆ ಎಲ್-1 ಕಂಪನಿ ಸೇರಿ 5 ಕಂಪನಿಗಳಿಗೆ 19 ಕೋಟಿ ರೂ.ಮೊತ್ತದಲ್ಲಿ ಸ್ಯಾನಿಟೈಸರ್ ಪೂರೈಸಲು ಖರೀದಿ ಆದೇಶ ಕೊಟ್ಟಿದ್ದಾರೆ.
ಮೂರು ಪಟ್ಟು ದರ 
ಕಾಳದಂಧೆಕೋರರನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ 500 ಎಂಎಲ್ ಸ್ಯಾನಿಟೈಸರ್ ಬಾಟಲ್‌ಗೆ  250 ರೂ.ದರ ನಿಗದಿಗೊಳಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದೆರಡು ಬಾಟಲ್‌ಗಳಿಗೆ ಅಷ್ಟೇ ಮೊತ್ತಕ್ಕೆ ಖರೀದಿಸಬೇಕಾಗುತ್ತದೆ. ಆದರೆ, ಹೋಲ್‌ಸೆಲ್‌ನಲ್ಲಿ ಲಕ್ಷಾಂತರ ರೂ ಬಾಟಲ್‌ಗೆ ಆರ್ಡರ್ ಕೊಟ್ಟು ಖರೀದಿ ಮಾಡುವ ಸಂದರ್ಭದಲ್ಲಿ ಕಡಿಮೆ ಮೊತ್ತಕ್ಕೆ ನಿಗದಿಗೊಳಿಸಲಾಗುತ್ತದೆ.   ರಾಜ್ಯದಲ್ಲಿ ಸಾಕಷ್ಟು ಮಂದಿ ಸಗಟು ವಿತರಕರು ಇದ್ದಾರೆ. ಆದರೆ, ಸಂಸ್ಥೆಯ ಕೆಲ ಅಧಿಕಾರಿಗಳು ಕೆಟಿಪಿಪಿ ಕಾಯ್ದೆ 200ರ 4(ಜಿ) ಮತ್ತು 4(ಎ)ರಡಿಯಲ್ಲಿ ಕಡಿಮೆ ದರದಲ್ಲಿ ಸ್ಯಾನಿಟೈಸರ್ ಪೂರೈಸಲು ಅನುಮೋದನೆ ನೀಡಬೇಕಿತ್ತು. ಅದನ್ನು ಬಿಟ್ಟು ಕಮಿಷನ್ ಆಸೆಗಾಗಿ ಅಧಿಕಾರಿಗಳು ಏಕಾಏಕಿ ಮೂರುಪಟ್ಟು ಹೆಚ್ಚು ದರ ನಮೂದಿಸಿ ಕಂಪನಿಗಳಿಗೆ ಆರ್ಡರ್ ಕೊಟ್ಟಿದ್ದಾರೆ.
ಹಣ ವಸೂಲಿ ಮಾಡಿ
ಟೆಂಡರ್‌ನಲ್ಲಿ ನಮೂದಿಸಿದ ಮೊತ್ತಕ್ಕೆ ಖರೀದಿ ಆದೇಶ ನೀಡದೆ ಮೂರು ಪಟ್ಟು ಹೆಚ್ಚಿನ ಮೊತ್ತ ನಮೂದಿಸಿ ಖರೀದಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 11.89 ಕೋಟಿ ರೂ.  ನಷ್ಟವಾಗಿದೆ. ಈ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ಕೇಳಿಬಂದಿದೆ.
ನಿಯಮ ಅನುಸರಿಸುತ್ತಿಲ್ಲ
ಕೇರಳ, ಮಹಾರಾಷ್ಟ್ರ ಮತ್ತಿತರರ ರಾಜ್ಯಗಳ ಆರೋಗ್ಯ ಇಲಾಖೆಯಲ್ಲಿ ದರಪಟ್ಟಿ ಮೂಲಕ ಔಷಧಿ ಖರೀದಿಸಿದ್ದರೂ ಹಾಗೂ ಇ-ಮೇಲ್ ಮೂಲಕ ದರಪಟ್ಟಿ ಪಡೆದರೂ ನಿಗದಿತ ದಿನಾಂಕದಂದೆ ದರಪಟ್ಟಿ ತೆರೆಯುವಂತೆ ವೆಬ್‌ಸೈಟ್ ಅಥವಾ ಇ-ಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಹಾಕಿರಲಾಗುತ್ತದೆ. ಆದರೆ, ನೆರೆ ರಾಜ್ಯಗಳ ಮಾದರಿಯನ್ನು ಏಕೆ ನಮ್ಮ ರಾಜ್ಯದಲ್ಲಿ ಅನುಸರಿಸುತ್ತಿಲ್ಲ? ಒಂದು ವೇಳೆ ಆ ಮಾದರಿಯನ್ನು ಅನುಸರಿಸಿದರೆ ಕೆಲ ಭ್ರಷ್ಟ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ ಎಂಬ ಭಯದಿಂದ ಈ  ನಿಯಮವನ್ನು ಕೈಬಿಡಲಾಗಿದೆ.