Friday, 13th December 2024

Waqf Board: ವಿಜಯಪುರ ಜಿಲ್ಲೆಯಲ್ಲಿ 14 ಸಾವಿರ ಎಕರೆ ರೈತರ ಭೂಮಿ ವಕ್ಫ್ ಹೆಸರಿಗೆ: ವರದಿ ಸಲ್ಲಿಸಿದ ಕಾರಜೋಳ

govinda karajola

ವಿಜಯಪುರ: ವಿಜಯಪುರ ಜಿಲ್ಲೆ (Vijayapura news) ಒಂದರಲ್ಲಿಯೇ 14,210 ಎಕರೆ ರೈತರ ಜಮೀನು ವಕ್ಫ್‌ ಬೋರ್ಡ್ (Waqf Board) ಹೆಸರಿನಲ್ಲಿ ಕಬಳಿಕೆಯಾಗಿದೆ ಎಂದು ಗೋವಿಂದ ಕಾರಜೋಳ (Govinda Karajola) ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್‌ ಬೋರ್ಡ್‌ನಿಂದಾದ ಅವಾಂತರ ಕುರಿತು ಬಿಜೆಪಿಯ ಸತ್ಯಶೋಧನಾ ಸಮಿತಿಯನ್ನು ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಚಿಸಿದ್ದರು. ಆ ಸಮಿತಿ ಈಗ ವರದಿ ಸಲ್ಲಿಸಿದೆ. ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಮೊದಲು ವಿಜಯಪುರ ಜಿಲ್ಲೆಯಲ್ಲಿ ವಿವಾದ ಆರಂಭವಾಗಿತ್ತು. ಜಿಲ್ಲೆಯ ಅನೇಕ ರೈತರ ಜಮೀನು ವಕ್ಫ್ ಆಸ್ತಿಯೆಂದು ಜಮೀನಿನ ಪಹಣಿಯಲ್ಲಿ ನಮೂದಾಗಿದ್ದು ಕಂಡು ರೈತರು ಆಘಾತಕ್ಕೆ ಒಳಗಾಗಿದ್ದರು.ಈ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.

ಸಿಂದಗಿಯಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ನಿರ್ಮಿಸಲಾದ ಮಠದ ಆಸ್ತಿ, ದೇವರ ಹಿಪ್ಪರಗಿ ತಾಲೂಕಿನ ಪಡಗನೂರು ಗ್ರಾಮದಲ್ಲಿ ಸರ್ವೆ ಸಂಖ್ಯೆ 220ರಲ್ಲಿ 57 ಎಕರೆ ಜಮೀನು, ಪಡಗನೂರು ಗ್ರಾಮದಲ್ಲಿನ ಕಾಲದ ಚಾಲುಕ್ಯರ ದೇವಸ್ಥಾನ, ವಿಜಯಪುರ ನಗರದಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಸರ್ವೆ ಸಂಖ್ಯೆ 811ರ 77 ಎಕರೆ 10 ಗುಂಟೆ ಜಾಗ, ಸೇರಿದಂತೆ ವಿಜಯಪುರ ಜಿಲ್ಲೆಯ ಎಲ್ಲ ಸಮುದಾಯಗಳ ರೈತಾಪಿ ಜನರ ಒಟ್ಟು 14,210 ಎಕರೆ ಜಮೀನನ್ನು ವಕ್ಫ್‌ ಬೋರ್ಡ್ ಹೆಸರಿನಲ್ಲಿ ಕಬಳಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ, ವಿಜಯಪುರ ಜಿಲ್ಲೆಯ ಖ್ಯಾತ ಐತಿಹಾಸಿಕ ಸ್ಮಾರಕವಾದ ಗೋಲ್‌ಗುಂಬಜ್‌ ಕೂಡ ತನ್ನದು ಎಂದು ವಕ್ಫ್‌ ಬೋರ್ಡ್‌ ಹಕ್ಕುಸ್ವಾಮ್ಯ ಸಾಧಿಸಿದೆ. ಜೊತೆಗೆ ಇನ್ನೂ ಹಲವು ಸ್ಮಾರಕಗಳು ತನ್ನದು ಎಂದಿದೆ. ಆದರೆ ಇದನ್ನು ಭಾರತೀಯ ಪುರಾತತ್ವ ಇಲಾಖೆ ಮಾನ್ಯ ಮಾಡಿಲ್ಲ.

ಇದನ್ನೂ ಓದಿ: Waqf Board: ಗೋಲ್‌ಗುಂಬಜ್‌ ಸೇರಿ 53 ಐತಿಹಾಸಿಕ ಸ್ಮಾರಕ ವಕ್ಫ್‌ ಆಸ್ತಿ! ಹಂಪಿಯಲ್ಲೂ 6 ಸ್ವತ್ತುಗಳ ಮೇಲೆ ಹಕ್ಕುಸ್ವಾಮ್ಯ