Thursday, 3rd October 2024

7th Pay Commission: ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ; ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶ

7th Pay Commission

ಬೆಂಗಳೂರು: ರಾಜ್ಯದ ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. 7ನೇ ರಾಜ್ಯ ವೇತನ ಆಯೋಗದ (7th Pay Commission) ವರದಿಯಂತೆ ಅನುದಾನಿತ ಶಾಲಾ ಶಿಕ್ಷಕರಿಗೆ ಪರಿಷ್ಕೃತ ವೇತನ ಸೌಲಭ್ಯವನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪ್ರಾಥಮಿಕ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್‌. ಹೊಸಮಠ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಸಹಾಯಾನುದಾನ ಪಡೆಯುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಾಲಾ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಇತರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ರಾಜ್ಯ ವೇತನ ಶ್ರೇಣಿಯಲ್ಲಿರುವ ನೌಕರರಿಗೆ 2024ರ ಆ.17ರಂದು ಹೊರಡಿಸಿರುವ ಕರ್ನಾಟಕ ನಾಗರಿಕ ಸೇವಾ(ಪರಿಷ್ಕೃತ ವೇತನ) ನಿಯಮಗಳು-2024 ಹಾಗೂ ಸಂಬಂಧಿತ ಸರ್ಕಾರದ ಆದೇಶಗಳನ್ನು ವಿಸ್ತರಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ವೇತನ ಹೆಚ್ಚಳ ಸೌಲಭ್ಯ ವಿಸ್ತರಿಸಲು ಸರ್ಕಾರವು ಹರ್ಷಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿ ಜಾರಿ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಯ ಕಾಯಂ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ (7th Pay Commission) ವರದಿ ಅನ್ವಯ ಪರಿಷ್ಕೃತ ವೇತನ ಶ್ರೇಣಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್‌ ಅವರು ಆದೇಶ ಹೊರಡಿಸಿದ್ದಾರೆ. 7ನೇ ರಾಜ್ಯ ವೇತನ ಆಯೋಗ ಶಿಫಾರಸು ಮಾಡಿರುವಂತೆ ಪರಿಷ್ಕೃತ ವೇತನ ಶ್ರೇಣಿ ಮತ್ತು ಸೌಲಭ್ಯಗಳನ್ನು ಯಥಾವತ್ತಾಗಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ (ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ) ಕಾಯಂ ನೌಕರರುಗಳಿಗೂ ಜಾರಿಗೊಳಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸಂಚಿತ ನಿಧಿಯಿಂದ ಭರಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು 2024ರ ಜು.22ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿ, ಅದರಂತೆ ರಾಜ್ಯ ಸರ್ಕಾರಿ ನೌಕರರ ಮುಖ್ಯವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಹಾಗೂ ಪಿಂಚಣಿಯನ್ನು 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿತ್ತು. ಈ ಆದೇಶದ ಅನ್ವಯ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | BESCOM EV Mitra App: ಇವಿ ಚಾರ್ಚಿಂಗ್‌ ಸ್ಟೇಷನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಬೆಸ್ಕಾಂ ʼಇವಿ ಮಿತ್ರʼ ಆ್ಯಪ್‌ಗೆ ಹೊಸ ರೂಪ

ಸರ್ಕಾರದ ಆದೇಶ ಸಂಖ್ಯೆ: ಆಇ / ಪಿಇಎನ್ / 262 / 2024, ದಿನಾಂಕ: 28.08.2024 ರಲ್ಲಿ ರಾಜ್ಯ ಸರ್ಕಾರಿ ನಿವೃತ್ತಿದಾರರಿಗೆ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿರುತ್ತದೆ. ಆದ್ದರಿಂದ, 7ನೇ ವೇತನ ಆಯೋಗದ ಶಿಫಾರಸಿನಂತೆ 2024ರ ಪರಿಷ್ಕೃತ ಪಿಂಚಣಿ ಶ್ರೇಣಿಯನ್ನು ಪೌರಸೇವಾ ವೃಂದದ ಪಿಂಚಣಿದಾರರಿಗೆ ಯಥಾವತ್ತಾಗಿ ವಿಸ್ತರಿಸಲು ಆದೇಶ ಹೊರಡಿಸುವಂತೆ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು (ಹಣಕಾಸು) ಕೋರಿದ್ದರು. ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ.