ಬೆಂಗಳೂರು
ಕರೋನಾ ಕರ್ಪ್ಯೂನಿಂದ ತೊಂದರೆಗೆ ಸಿಲುಕಿರುವ ಜನರಿಗೆ ಊಟ ಹಾಗೂ ದಿನ ನಿತ್ಯದ ಸಾಮಗ್ರಿಗಳನ್ನು ತಲುಪಿಸುವ ಕಾರ್ಯದಲ್ಲಿ ಮುಂಚೂಣೀಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಇಂದು ಬನ್ನೇರಘಟ್ಟದ ಬಳಿ ಇರುವ ಆನೇಕಲ್ ತಾಲ್ಲೂಕಿನ ಬೂತಾನಹಳ್ಳಿಯ 400 ಕ್ಕೂ ಹೆಚ್ಚು ಹಕ್ಕಿ – ಪಿಕ್ಕಿ ಜನಾಂಗದ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಳೆದ ವಾರ ಈ ಭಾಗಕ್ಕೆ ಭೇಟಿ ನೀಡಿದ್ದ ಅದಮ್ಯ ಚೇತನ ಸಂಸ್ಥೆಯ ತಂಡಕ್ಕೆ ಇಲ್ಲಿರುವ ಕುಟುಂಬಗಳ ಸ್ಥಿತಿಗತಿಯನ್ನು ನೋಡಿದ ನಂತರ ಇನ್ನೊಮ್ಮೆ ದಿನಸಿ ಸಾಮಗ್ರಿಗಳನ್ನು ವಿತರಿಸಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಅವರು ಆ ಕುಟುಂಬಗಳಿಗೆ ಇನ್ನೂ ಹೆಚ್ಚಿನ ದಿನಸಿ ಸಾಮಗ್ರಿಗಳನ್ನು ನೀಡುವಂತೆ ಸೂಚನೆ ನೀಡಿದರು ಎಂದು ತಂಡದ ಸದಸ್ಯರು ತಿಳಿಸಿದರು.
ಕರೋನಾ ಕರ್ಪ್ಯೂ ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಇದುವರೆಗೂ ಸುಮಾರು 3 ಲಕ್ಷದ 70 ಸಾವಿರಕ್ಕೂ ಹೆಚ್ಚು ಊಟವನ್ನು ಹಾಗೂ 12 ಸಾವಿರಕ್ಕೂ ಹೆಚ್ಚು ದಿನಸಿ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಗಿದೆ. ಈಶಾನ್ಯ ರಾಜ್ಯಗಳಿಂದ, ಬಿಹಾರದಿಂದ ಮತ್ತು ನಾಗಾಲ್ಯಾಂಡ್ನಿಂದ ವಲಸೆ ಬಂದಿರುವಂತಹ ಹಲವಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರನ್ನು ಅದಮ್ಯ ಚೇತನ ತಂಡ ಪತ್ತೆ ಹಚ್ಚಿದೆ. ಅಲ್ಲದೆ, ಅವರವರ ಆಹಾರ ಪದ್ದತಿಯ ಪ್ರಕಾರವಾಗಿ ಬೇಕಾಗಿರುವ ಆಹಾರ ಪದಾರ್ಥಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ದಿವಂಗತ ಅನಂತಕುಮಾರ್ ಅವರ ಆಶಯದಂತೆ ನಡೆಯುತ್ತಿರುವ ಈ ಸಂಸ್ಥೆಯ ಮೂಲಕ ಅಗತ್ಯವಿರುವ ಇನ್ನೂ ಹೆಚ್ಚಿನ ಜನರಿಗೆ ಅಗತ್ಯ ಸಹಾಯವನ್ನು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಡಾ ತೇಜಸ್ವಿನಿ ಅನಂತಕುಮಾರ್ ಅವರು ಹೇಳಿದರು.