Thursday, 12th December 2024

Abhishek Ambareesh: ಅಭಿಷೇಕ್ ಅಂಬರೀಶ್-‌ ಅವಿವಾ ದಂಪತಿಗೆ ಗಂಡು ಮಗು, ಮೊಮ್ಮಗನ ಜೊತೆ ಸುಮಲತಾ ಪೋಸ್‌

abhishek aviva son

ಬೆಂಗಳೂರು: ಸ್ಯಾಂಡಲ್‌ವುಡ್‌ ಸ್ಟಾರ್ ಅಭಿಷೇಕ್ ಅಂಬರೀಶ್‌ (Abhishek Ambareesh) ಹಾಗೂ ಅವಿವಾ ಬಿದಪ್ಪ (Aviva Bidapa) ದಂಪತಿಗೆ ಗಂಡು ಮಗು ಜನಿಸಿದೆ. ಇಂದು (ನವೆಂಬರ್ 12) ಮಗು ಜನಿಸಿದೆ. ಮಗುವಿನ ಜೊತೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಪೋಸ್ ಕೊಟ್ಟಿದ್ದು, ಈ ಫೋಟೋ ವೈರಲ್ ಆಗಿದೆ.

ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಭಿಷೇಕ್-‌ ಅವಿವಾ 2023ರಲ್ಲಿ ವಿವಾಹ ಆಗಿದ್ದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಈಗ ಕುಟುಂಬದಿಂದ ಖುಷಿಯ ಸುದ್ದಿ ಹೊರ ಬಂದಿದೆ. ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆ. ‌

ಇಂದು ಬೆಳಿಗ್ಗೆ 8.30 ಸುಮಾರಿಗೆ ಮಗುವಿನ ಆಗಮನ ಆಗಿದೆ. ಅವಿವಾ ಮಗು ಸಖತ್ ಮುದ್ದಾಗಿದೆ. ಅವಿವಾ ಅವರು ಪ್ರೆಗ್ನೆಂಟ್ ಎನ್ನುವ ವಿಚಾರ ಇತ್ತೀಚೆಗೆ ರಿವೀಲ್ ಆಗಿತ್ತು. ಅದ್ಧೂರಿಯಾಗಿ ಅವರ ಸೀಮಂತಶಾಸ್ತ್ರ ಕೂಡ ನೆರವೇರಿತ್ತು. ಈಗ ಅವರು ಗಂಡು ಮಗುವಿನ ತಾಯಿ ಆಗಿದ್ದು, ‘ಅಂಬಿ ಮತ್ತೆ ಹುಟ್ಟಿ ಬಂದ’ ಎಂದು ಅಂಬರೀಷ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನೆರವೇರಿದ್ದ ಅವಿವಾ ಅವರ ಸೀಮಂತ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕರು ಬಂದು ಅವಿವಾ ಅವರನ್ನು ಹರಸಿದ್ದರು. ಅವಿವಾ ಬಿದಪ್ಪ ಅವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದಪ್ಪ ಮಾಡೆಲಿಂಗ್​ನಲ್ಲಿಯೂ ಆಸಕ್ತಿ ಹೊಂದಿದ್ದಾರೆ.

2019ರ ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಬ್ರೇಕ್ ಪಡೆದರು. 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಹೆಸರಿನ ಸಿನಿಮಾ ಮಾಡಿದರು. ಅವರು ಈ ಮೊದಲು ‘ಕಾಳಿ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಆದರೆ, ಈ ಬಗ್ಗೆ ಯಾವುದೇ ಅಪ್​ಡೇಟ್ ಇಲ್ಲ.