Thursday, 3rd October 2024

Actor Darshan: ನಟ ದರ್ಶನ್‌ಗೆ ಜೈಲೇ ಗತಿ; ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ (Actor Darshan) ಮತ್ತು ಸಹಚರರಿಗೆ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್‌ ಮತ್ತೆ ವಿಸ್ತರಿಸಿದೆ. ಸೆಪ್ಟೆಂಬರ್ 30ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಮಂಗಳವಾರಕ್ಕೆ ಅಂತ್ಯವಾದ ಹಿನ್ನೆಲೆಯಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳನ್ನು ಕೋರ್ಟ್‌ಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ತನಿಖಾಧಿಕಾರಿಗಳು ನ್ಯಾಯಾಧೀಶರಿಗೆ ತಾಂತ್ರಿಕ ಸಾಕ್ಷ್ಯಗಳನ್ನು ಸಲ್ಲಿಸಿದರು.

ಇನ್ನು ದರ್ಶನ್ ಪರ ವಕೀಲರು ವಾದ ಮಂಡಿಸಿ, ದರ್ಶನ್‌ಗೆ ಬೆನ್ನು ನೋವು ಇದೆ ಎಂದು ಹೇಳಿದರೂ ಚೇರ್ ವ್ಯವಸ್ಥೆ ಮಾಡುತ್ತಿಲ್ಲ, ಗೆಳೆಯರು, ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ಈ ವೇಳೆ ತಾಂತ್ರಿಕ ಸಾಕ್ಷ್ಯ ಜತೆಗೆ ಸಿಎಫ್‌ಎಸ್‌ಎಲ್ ವರದಿ ಸಲ್ಲಿಸಿದ ತನಿಖಾಧಿಕಾರಿಗಳು, ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಾಗಿದೆ. ಪ್ರಕರಣದ 10ನೇ ಆರೋಪಿ ವಿನಯ್ ಮೊಬೈಲ್ ಅನ್ನು ಮತ್ತೆ ಎಪ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು. ಪೊಲೀಸರ ಮನವಿಗೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆ. 30 ರವರೆಗೂ ಮುಂದೂಡಿ ಆದೇಶ ಹೊರಡಿಸಿದರು.

ಈ ಸುದ್ದಿಯನ್ನೂ ಓದಿ | Self Harming: ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ವ್ಯಕ್ತಿ ಯತ್ನ; ಪವಾಡ ಸದೃಶ ಪಾರು!

ಬಿಜೆಪಿ ಶಾಸಕ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಜಾತಿನಿಂದನೆ (Atrocity) ಹಾಗೂ ಕೊಲೆ ಬೆದರಿಕೆ (Death threat) ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದ ರಾಜರಾಜೇಶ್ವರಿ ನಗರ ಶಾಸಕ, ಬಿಜೆಪಿ ಮುಖಂಡ ಮುನಿರತ್ನ (BJP MLA Munirathna) ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.

ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ಮಾಜಿ ಸಚಿವ ಮುನಿರತ್ನ ಅವರನ್ನು ನಿನ್ನೆ ಬಂಧಿಸಿದ್ದರು. ಇಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಂದು ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಮುಂದೆ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಪ್ರಕರಣದ ತನಿಖೆಗಾಗಿ ಮುನಿರತ್ನ ಅವರನ್ನು ಮತ್ತೆ ಪೊಲೀಸರು ವಶಕ್ಕೆ ಕೋರಿದ್ದರು. ಆದರೆ, ಮುನಿರತ್ನ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿ, ಜಾಮೀನು ಅರ್ಜಿ ಕುರಿತು ವಾದ ಮಂಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಿದ ನ್ಯಾಯಾಲಯ ಮುನಿರತ್ನ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದರೊಂದಿಗೆ ಬಹುಕೋಟಿ ʼಕುರುಕ್ಷೇತ್ರʼ ಚಲನಚಿತ್ರದ ಇಬ್ಬರು ಜೈಲುಪಾಲಾದಂತಾಗಿದೆ. ʼಕುರುಕ್ಷೇತ್ರʼವನ್ನು ಮುನಿರತ್ನ ನಿರ್ಮಿಸಿದ್ದರು. ಅದರಲ್ಲಿ ನಟ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದರು. ಮೂರು ತಿಂಗಳ ಹಿಂದೆ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಪಾಲಾಗಿದ್ದಾರೆ. ಇದೀಗ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕ ಮುನಿರತ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ಏನಿದು ಘಟನೆ?

ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ದ ಸೆ.14ರಂದು ವೈಯಾಲಿಕಾವಲ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿತ್ತು. ಕಸ ನಿರ್ವಹಣೆ ಹಾಗೂ ವಿಲೇವಾರಿ ಸಂಬಂಧ 30 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದರು. ಹೀಗಾಗಿ ವೈಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಇನ್ನು ಜಾತಿ ನಿಂದನೆ ಮಾಡಿದ್ದಾರೆ ಎಂದು ವೇಲುನಾಯಕ್‌ ಎಂಬುವವರು ನೀಡಿದ ದೂರಿನ ಮೇರೆಗೆ ಇದೇ ಠಾಣೆಯಲ್ಲಿ ಮುನಿರತ್ನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಸರ್ಕಾರಿ ಅಧಿಕಾರಿ ವಿಜಯ್‌ ಕುಮಾರ್‌, ಕಾರ್ಯದರ್ಶಿ ಅಭಿಷೇಕ್, ಶಾಸಕರ ಆಪ್ತ ವಸಂತ ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಮೇಲೆ ಶಾಸಕ ಮುನಿರತ್ನ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು, ಲೋಕೇಶನ್‌ ಆಧರಿಸಿ ತೆರಳಿ, ಕೋಲಾರದ ನಂಗಲಿ ಬಳಿ ವಶಕ್ಕೆ ಪಡೆದಿದ್ದರು. ಆಂಧ್ರದ ಚಿತ್ತೂರಿಗೆ ತೆರಳಲು ಕಾರಿನಲ್ಲಿ ಶಾಸಕ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಸುದೀರ್ಘ ವಿಚಾರಣೆ ನಡೆಸಿ ಶಾಸಕನನ್ನು ಬಂಧಿಸಿದ್ದರು.