ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಆರೋಪಿ ನಟ ದರ್ಶನ್ (Actor Darshan) ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ (Karnataka High Court) ನಡೆದಿದ್ದು, ಜಾಮೀನು ಅರ್ಜಿಯನ್ನು (Bail plea) ನವೆಂಬರ್ 26 ಕ್ಕೆ ಮುಂದೂಡಲಾಗಿದೆ.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು, ದರ್ಶನ್‌ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲ ಎಂದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಹೆಚ್ಚುವರಿ ಆರೋಪಪಟ್ಟಿಯನ್ನು ವಿಚಾರಣಾ ಕೋರ್ಟ್ಗೆ ಸಲ್ಲಿಸಲಾಯ್ತು. ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ಇನ್ನೂ ನಿಗದಿಪಡಿಸಿಲ್ಲವೆಂದು ಎಸ್ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.
ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಿದರು. ಅದೇ ವೈದ್ಯಕೀಯ ವರದಿಯ ಪ್ರತಿಯನ್ನು ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲಾಯ್ತು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.
ದರ್ಶನ್‌ಗೆ ವೈದ್ಯಕೀಯ ಕಾರಣಗಳಿಗಾಗಿ ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ಈಗಾಗಲೇ ನೀಡಿದೆ. ಮೂರು ವಾರಗಳು ಈಗಾಗಲೇ ಕಳೆದು ಹೋಗಿವೆ. ಆದರೆ ದರ್ಶನ್‌ಗೆ ಇನ್ನೂ ಯಾವುದೇ ಸರ್ಜರಿ ಮಾಡಲಾಗಿಲ್ಲ. ಇದರ ನಡುವೆ ಮಧ್ಯಂತರ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಇದನ್ನು ಗೃಹ ಸಚಿವ ಪರಮೇಶ್ವರ್ ಸಹ ಖಾತ್ರಿ ಪಡಿಸಿದ್ದಾರೆ. ದರ್ಶನ್‌ಗೆ ಮಧ್ಯಂತರ ಜಾಮೀನು ಮಾತ್ರವೇ ದೊರೆತಿದ್ದು, ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಮಾಡುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದ ದರ್ಶನ್‌ಗೆ ಮೂರು ವಾರಗಳ ಹಿಂದಷ್ಟೆ ಮಧ್ಯಂತರ ಜಾಮೀನು ನೀಡಲಾಗಿದೆ. ಅನಾರೋಗ್ಯದ ಕಾರಣ ನೀಡಿ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್ ಚೇರ್