Wednesday, 11th December 2024

Actor Darshan: ರೇಣುಕಾಸ್ವಾಮಿ ಮರ್ಮಾಂಗಕ್ಕೆ ಕರೆಂಟ್‌ ಶಾಕ್‌, 39 ಕಡೆ ಗಾಯ!

actor darshan renukaswamy murder case

ಬೆಂಗಳೂರು: ದರ್ಶನ್‌ ಆಂಡ್‌ ಗ್ಯಾಂಗ್‌ (Actor Darshan) ನಡೆಸಿದ ರೇಣುಕಾಸ್ವಾಮಿ ಹಲ್ಲೆ ಹಾಗೂ ಹತ್ಯೆ (Ranukaswamy Murder) ಪ್ರಕರಣದಲ್ಲಿ ಇನ್ನಷ್ಟು ಬೀಭತ್ಸ ವಿವರಗಳು ಹೊರಬರುತ್ತಿವೆ. ಹಲ್ಲೆಯ (Assault) ಸಂದರ್ಭದಲ್ಲಿ ಮೆಗ್ಗರ್‌ ಮೆಶೀನ್‌ನಿಂದ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹಲವು ಬಾರಿ ಕರೆಂಟ್‌ ಶಾಕ್‌ (Electric Shock) ನೀಡಿ ಹಿಂಸಿಸಲಾಗಿತ್ತು ಎಂದು ಗೊತ್ತಾಗಿದೆ. ನತದೃಷ್ಟನ ಮೇಲಾದ ಬರ್ಬರ ಹಿಂಸೆಯ ಪರಿಣಾಮ ದೇಹದಲ್ಲಿ 39 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮೃತನ ವೃಷಣ ಸೇರಿ ದೇಹದ 39 ಕಡೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಭೀಕರವಾಗಿ ಹತ್ಯೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಪ್ರಕರಣದ ಪ್ರತಿಯೊಬ್ಬ ಆರೋಪಿಗಳ ಪಾತ್ರ ಹಾಗೂ ಏನೆಲ್ಲ ಸಾಕ್ಷಿಗಳು ದೊರಕಿವೆ ಎಂಬುದನ್ನು ದಾಖಲಿಸಲಾಗಿದೆ.

ರೇಣುಕಾಸ್ವಾಮಿಯ ವೃಷಣಗಳಿಗೆ ಆರೋಪಿಗಳು ಹೈ ಪವರ್‌ ಎಲೆಕ್ಟ್ರಿಕ್‌ ಶಾಕ್‌ ನೀಡಿದ್ದಾರೆ. ಜತೆಗೆ ಅವುಗಳ ಮೇಲೆ ಕಾಲಿನಿಂದ ಒತ್ತಿ ಹಾನಿಗೊಳಿಸಿರುವುದು ಪತ್ತೆಯಾಗಿದೆ. ಹೀಗಾಗಿ ಅವುಗಳ ಮೇಲಿನ ಚರ್ಮ ಕಿತ್ತು ಬಂದಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಆತನ ಎದೆ, ಹೊಟ್ಟೆ, ಬೆನ್ನು ಹಾಗೂ ತಲೆಯ ಭಾಗಕ್ಕೆ ಕೈ, ಕಾಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ ಪರಿಣಾಮ ಆಂತರಿಕ ಮತ್ತು ಬಾಹ್ಯವಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈ ವೇಳೆ ಆತನ ಎದೆಮೂಳೆ ಮುರಿತವಾಗಿದೆ. ಹೀಗೆ ಆತನ ದೇಹದ 39 ಕಡೆಗಳಲ್ಲಿ ತೀವ್ರ ಗಾಯಗಳಾಗಿವೆ ಎಂದು ದಾಖಲಿಸಲಾಗಿದೆ. ಅದನ್ನೇ ಆರೋಪಪಟ್ಟಿಯಲ್ಲೂ ಉಲ್ಲೇಖಿಸಲಾಗಿದೆ.

ದರ್ಶನ್‌ ಸೇರಿ ಎಲ್ಲ 14 ಮಂದಿ ಆರೋಪಿಗಳು ಕೃತ್ಯದ ಸಂದರ್ಭದಲ್ಲಿ ಘಟನೆ ನಡೆದ ಸ್ಥಳದಲ್ಲಿದ್ದ ಬಗ್ಗೆ ಮೊಬೈಲ್‌ ಲೊಕೇಶನ್‌ ಸಾಕ್ಷಿ ಹೇಳಿದೆ. ಪಟ್ಟಣಗೆರೆ ಶೆಡ್‌ನ‌ ಸಿಸಿ ಕೆಮೆರಾದಲ್ಲಿ ದರ್ಶನ್‌, ಪವಿತ್ರಾ ಗೌಡ ಕೆಲವು ಬಾರಿ ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಕೃತ್ಯದ ದಿನ ದರ್ಶನ್‌ ಮತ್ತು ಇತರ ಆರೋಪಿಗಳು ಧರಿಸಿದ್ದ ಬಟ್ಟೆಗಳ ಮೇಲಿನ ರಕ್ತದ ಕಲೆಗಳು ರೇಣುಕಾಸ್ವಾಮಿಯದ್ದೆ ಎಂಬುದು ದೃಢವಾಗಿದೆ. ಎಫ್ಎಸ್‌ಎಲ್‌ ವರದಿಗಳು ಕೂಡ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ರೇಣುಕಾಸ್ವಾಮಿ ಹಲ್ಲೆ ನಡೆಸಿರುವ ಕುರಿತು ಸಾಕಷ್ಟು ಸಾಕ್ಷಗಳನ್ನು ನೀಡಿವೆ. ಎಲ್ಲ ಆರೋಪಿಗಳ ಮೊಬೈಲ್‌ ರಿಟ್ರೈವ್‌ ಮಾಡಲಾಗಿದೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆರೋಪಿಗಳ ಪೈಕಿ ಒಬ್ಬ ಫೋಟೋ ತೆಗೆದುಕೊಂಡಿದ್ದು, ವೀಡಿಯೋ ಮಾಡಿಕೊಂಡಿರುವುದು ಆರೋಪಿಗಳ ಮೊಬೈಲ್‌ಗ‌ಳ ರಿಟ್ರೈವ್‌ ಮಾಡುವಾಗ ಪತ್ತೆಯಾಗಿದೆ. ಈ ವೇಳೆ ತನ್ನ ಮೇಲೆ ಪವಿತ್ರಾಗೌಡ ಮತ್ತು ದರ್ಶನ್‌ ಹಾಗೂ ಇತರರು ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾನೆ. ಆದರೂ ಆರೋಪಿಗಳು ಕಾಲಿನಿಂದ ಒದ್ದು ಪೈಶಾಚಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಓದಿ: Actor Darshan: ದರ್ಶನ್‌ ಗ್ಯಾಂಗ್‌ ಮುಂದೆ ಅಂಗಲಾಚುತ್ತಿರುವ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋ ವೈರಲ್‌