Friday, 13th December 2024

Actor Jaggesh: ಗುರುಪ್ರಸಾದ್ ಎರಡನೇ ಹೆಂಡತಿಯ ಮಗುವಿಗೆ ಆಸರೆ; ಜಗ್ಗೇಶ್ ನಿರ್ಧಾರ

Actor Jaggesh

ಬೆಂಗಳೂರು: ಸಾಲಬಾಧೆಯಿಂದ ಖಿನ್ನತೆಗೊಳಗಾಗಿದ್ದ ನಿರ್ದೇಶಕ ಗುರುಪ್ರಸಾದ್‌ ಅವರು ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ನಟ ಜಗ್ಗೇಶ್ ಅವರು ತಮ್ಮ ‘ಮಠ’ ಚಿತ್ರದ ಮೂಲಕ ಗುರುಪ್ರಸಾದ್​ಗೆ ನಿರ್ದೇಶಕ ಆಗುವ ಅವಕಾಶ ಕೊಟ್ಟಿದ್ದರು. ಇದಾದ ಬಳಿಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ಕೂಡ ಜಗ್ಗೇಶ್ (Actor Jaggesh) ನಟನೆಯ ‘ರಂಗನಾಯಕ’ ಸಿನಿಮಾ ಆಗಿದೆ. ಚಿತ್ರರಂಗಕ್ಕೆ ಬಂದಾಗಿನಿಂದಲೂ ಹತ್ತಿರದಿಂದ ನೋಡಿದ್ದ ನಟ ಜಗ್ಗೇಶ್‌ ಅವರು ಇದೀಗ ಗುರುಪ್ರಸಾದ್‌ ಅವರ ಬಗ್ಗೆ ಮಾತನಾಡಿದ್ದು, ಅವರಿಗೆ ಈ ಪರಿಸ್ಥಿತಿ ಬರಲು ಕಾರಣವೇನು ಎಂಬ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರೊರೊಂದಿಗೆ ಮಾತನಾಡಿರುವ ಜಗ್ಗೇಶ್ ಅವರು‌, ಗುರುಪ್ರಸಾದ್‌ಗೆ ಒಳ್ಳೆಯ ಹೆಂಡತಿ ಸಿಕ್ಕಿದ್ದಳು. ಆಕೆಯ ಹೆಸರು ಅರುಂಧತಿ, ಅವರಿಗೆ ಮುದ್ದಾಗ ಮಗಳಿದ್ದಳು. ಅವರಿಬ್ಬರೂ ಯೋಗಪಟುಗಳಾಗಿದ್ದರು. ರಾಷ್ಟ್ರಮಟ್ಟದಲ್ಲಿ ಫೇಮಸ್‌ ಆಗಿದ್ದರು. ಅವರ ಜತೆ ವಿಚ್ಛೇದನ ಮಾಡಿಕೊಂಡ. ನಂತರ ಅಮಾಯಕ ಹೆಣ್ಣು ಮಗಳನ್ನು ಮದುವೆ ಮಾಡಿಕೊಂಡಿದ್ದ. ಆಕೆಗೆ ಮೂರು ವರ್ಷದ ಹೆಣ್ಣು ಮಗು ಇತ್ತು. ಆ ಮಗುವಿಗೆ ಸಹಾಯ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೇನೆ, ಸಹಾಯ ಮಾಡುವೆ ಎಂದು ತಿಳಿಸಿದ್ದಾರೆ.

ಆರಂಭದ ದಿನಗಳ ಗುರು ಪ್ರಸಾದ್‌ನ ನೆನೆಸಿಕೊಂಡರೆ… ಆತ ಬಹಳ ಆಶಾವಾದಿ, ಮೋಸ್ಟ್‌ ಡಿಸಿಪ್ಲೆನ್ ವ್ಯಕ್ತಿಯಾಗಿದ್ದ. ಯಾವುದೇ ವಿಷಯದ ಬಗ್ಗೆಯೂ ಅದ್ಭುತವಾಗಿ ಮಾತನಾಡುತ್ತಿದ್ದ. ಹಲವರಿಗೆ ಬಹಳ ಸ್ಫೂರ್ತಿ ಕೊಡುತ್ತಿದ್ದ. ನಮ್ಮಿಬ್ಬರ ನಡುವೆ ಜಗಳ ಆದ ಮೇಲೆ, ಅವನ ಸಹವಾಸಗಳು ಬದಲಾಗಿ ಅವನ ಬಳಿಯಿದ್ದ ಒಳ್ಳೊಳ್ಳೆ ಅಸಿಸ್ಟೆಂಟ್ಸ್‌ ಎಲ್ಲಾ ದೂರವಾದರು ಎಂದು ತಿಳಿಸಿದ್ದಾರೆ.

ಹೇಯ್‌ ಬೋ… ಮಗನೇ ಸತ್ತೋಗೋ ಎಂದು ಬೈದಿದ್ದ!

ಒಂದು ದಿನ ರಾತ್ರಿ ಹೊತ್ತು ಫೋನ್‌ ಮಾಡಿದ್ದ. ಮಲಗಿದ್ದ ನಾನು ಎದ್ದು ಫೋನ್‌ ಎತ್ತಿದರೆ, “ಹೇಯ್‌ ಬೋ… ಮಗನೇ ಸತ್ತೋಗೋ, ನೀನು ಹಾಳಾಗಿ ಹೋಗಬೇಕು, ನೀನೊಬ್ಬ ಹೀರೋನಾ? ಸಾಯಿಸಿಬಿಡುತ್ತೀನಿ” ಎಂದು ಬೈದಿದ್ದ. ನಂತರ ಬೆಳಗ್ಗೆ ಬಂದು ಅಣ್ಣಾ, ದಯವಿಟ್ಟು ಕ್ಷಮಿಸಿ, ನಾನು ಜಾಸ್ತಿ ಕುಡಿದುಬಿಟ್ಟಿದ್ದೆ ಎನ್ನುತ್ತಿದ್ದ. ಇಂತಹವರಿಗೆ ಏನು ಹೇಳಬೇಕು ಎಂದು ಹೇಳಿದ್ದಾರೆ.

ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ ಅವರ ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯನ್ನು ತಡೆದವು. ಒಂದು ಮದ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದೇ ಹೋಗಿದ್ದರೆ ಗುರುಪ್ರಸಾದ್ ರಾಜ್ಯದ ನಂಬರ್ 1 ನಿರ್ದೇಶಕ ಆಗಿರುತ್ತಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ.

‘ಮಠ’ ಸಿನಿಮಾ ಮಾಡಬೇಕಾದರೆ ಇದ್ದ ಗುರುಪ್ರಸಾದ್ ನನಗೆ ಈಗಲೂ ನೆನಪಿನಲ್ಲಿದೆ. ಆಗ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಕೈಯಲ್ಲಿ ನಾಲ್ಕಾದರೂ ಪುಸ್ತಕ ಇರುತ್ತಿತ್ತು, ಅದೇ ಕೊನೆ-ಕೊನೆಗೆ ಗುರುಪ್ರಸಾದ್ ಸೆಟ್ಟಿಗೆ ಬಂದರೆ ಅವರ ಬ್ಯಾಗಿನಲ್ಲಿ ನಾಲ್ಕು ಬಾಟಲಿ ಇರುತ್ತಿದ್ದವು. ಇದರ ಜತೆಗೆ ಅಹಂ, ಸಿಟ್ಟು ಸಹ ಹೆಚ್ಚಿಗೆ ಇತ್ತು. ನನಗೆ ಸರಿ ಅನಿಸಿದ್ದನ್ನಷ್ಟೆ ಮಾಡುವೆ, ಯಾರ ಮಾತು ಕೇಳುವುದಿಲ್ಲ ಎಂಬ ಅಹಂ ಅವರಲ್ಲಿ ಹೆಚ್ಚಿಗೆ ಇತ್ತು ಎಂದು ಹೇಳಿದ್ದಾರೆ.

ನಾನು ಮತ್ತು ಅವರು ಸುಮಾರು ಹತ್ತು ವರ್ಷ ದೂರಾಗಿಬಿಟ್ಟಿದ್ದೆವು. ಆತನ ಜಗಳದ ಗುಣ ನನಗೆ ಇಷ್ಟವಾಗಿರಲಿಲ್ಲ. ಆ ನಂತರ ಕೆಲವು ಆಪ್ತರು ನಮ್ಮನ್ನು ಒಟ್ಟಿಗೆ ಕೆಲಸ ಮಾಡಲು ಸ್ಪೂರ್ತಿ ಕೊಟ್ಟರು, ನನ್ನ ಆತ್ಮೀಯರೆ ‘ರಂಗನಾಯಕ’ ಸಿನಿಮಾಕ್ಕೆ ಬಂಡವಾಳ ಹಾಕಿದರು. ನಿರ್ಮಾಪಕರು, ಗುರುಗೆ 90 ಲಕ್ಷ ಹಣ ಕೊಟ್ಟರು. ಅಷ್ಟೆಲ್ಲ ಮಾಡಿದರೂ ಗುರು ಅದಕ್ಕೆ ಗೌರವ ಕೊಡಲಿಲ್ಲ. ನನ್ನನ್ನು ಸೆಟ್​ಗೆ ಎರಡು ಗಂಟೆಗೆ ಕರೆಸಿಕೊಂಡರೆ ಆತ ನಾಲ್ಕು ಗಂಟೆಗೆ ಬರುತ್ತಿದ್ದ. ಬಂದಾಗಲೂ ಮದ್ಯದ ವಾಸನೆ ಹೋಗಿರುತ್ತಿರಲಿಲ್ಲ ಎಂದು ಸ್ಮರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bagheera Box Office: ಬಾಕ್ಸ್‌ ಆಫೀಸ್‌ನಲ್ಲಿ ‘ಬಘೀರ’ನ ಮ್ಯಾಜಿಕ್‌; 3 ದಿನಗಳಲ್ಲಿ ಶ್ರೀಮುರಳಿ-ರುಕ್ಮಿಣಿ ಚಿತ್ರ ಗಳಿಸಿದ್ದೆಷ್ಟು?

ಗುರುಪ್ರಸಾದ್‌ ಬಿಜೆಪಿ ವಿರೋಧಿ

ಇತ್ತೀಚಿನ ದಿನಗಳಲ್ಲಿ ನನಗೆ ಆತನ ಬಗ್ಗೆ ಗೊತ್ತಾಗಿದ್ದು ಏನೆಂದರೆ, ಆತ ಬಿಜೆಪಿ ವಿರೋಧಿ, ಎಡಪಂಥೀಯ ಚಿಂತಕ. ʼಇವನ ಮಾನ ಮರ್ಯಾದೆಯೆಲ್ಲ ಹೆಂಗೆ ಹರಾಜು ಹಾಕ್ತೀನಿ ನೋಡುತ್ತಾ ಇರಿ’ ಎಂದು ಅವನು ನನ್ನ ಬಗ್ಗೆ ಹೇಳಿಕೊಂಡಿದ್ದನಂತೆ. ಅದು ನನಗೆ ಗೊತ್ತಾಗಿತ್ತು. ನಾನು ತುಂಬಾ ಭಯಭೀತನಾದೆ. ಹಾಗಾಗಿ ನನಗೆ ಸಿನಿಮಾ ತೋರಿಸು ಎಂದೆ. ಆದರೆ ಅವನು ತೋರಿಸಲಿಲ್ಲ. ಸಿನಿಮಾ ರಿಲೀಸ್​ ಆದ ಬಳಿಕ ನನ್ನ ಜೀವನದಲ್ಲೇ ಆಗದೇ ಇರುವಷ್ಟು ಅವಮಾನ ಆ ಒಂದು ಸಿನಿಮಾದಿಂದ ಆಯಿತು ಎಂದು ರಂಗನಾಯಕ ಸಿನಿಮಾ ಬಗ್ಗೆ ಜಗ್ಗೇಶ್ ಹೇಳಿದ್ದಾರೆ.