Friday, 13th December 2024

Actor Prabhas: ಪ್ರಭಾಸ್‌ ಜತೆ 3 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಪ್ಯಾನ್‌ ಇಂಡಿಯಾ ಚಿತ್ರಗಳಿಗೆ ಒಂದಾದ ಸೂಪರ್‌ ಹಿಟ್‌ ಜೋಡಿ

Actor Prabhas

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ (Hombale Films) ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದಕ್ಕೆ ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌(Actor Prabhas), ಈಗ ಬಿಡುಗಡೆ ಆಗಿರುವ ಬಘೀರ ಸಿನಿಮಾಗಳೇ ಸಾಕ್ಷಿ ಒದಗಿಸುತ್ತವೆ. ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಹೊಸ ಮೆರುಗು ನೀಡಿದ್ದೂ ಇದೇ ಹೊಂಬಾಳೆ ಫಿಲ್ಮ್ಸ್‌ ಆಗಿದ್ದು, ಕಾಂತಾರ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಈ ವರೆಗಿನ ಸಿನಿಮಾಗಳು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಎಲ್ಲ ಭಾಷೆಗಳಿಗೆ ಸಲ್ಲುವ ಸಿನಿಮಾಗಳನ್ನು ನೀಡುತ್ತಿದೆ. ಅದರಂತೆ, ಸಲಾರ್‌ ಪಾರ್ಟ್‌ 2 ಮತ್ತು ಕಾಂತಾರ ಪಾರ್ಟ್‌ 2 ಶೂಟಿಂಗ್‌ ನಡುವೆಯೇ ಇದೀಗ ಮತ್ತೊಂದು ಮಹೋನ್ನತ ಸಿನಿಮಾ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ದೊಡ್ಡ ಅಪ್‌ಡೇಟ್‌ ನೀಡಿದೆ.

ಹೌದು, ಇದೀಗ ಸಲಾರ್‌ ಪಾರ್ಟ್‌ 2 ಸೇರಿ ಇನ್ನೂ ಎರಡು ಅಂದರೆ ಒಟ್ಟು ಮೂರು ಸಿನಿಮಾಗಳೊಂದಿಗೆ ಪ್ರಭಾಸ್ ಜತೆಗೆ ಹೊಂಬಾಳೆ ಫಿಲ್ಮ್ಸ್‌ ಕೈ ಜೋಡಿಸುತ್ತಿದೆ. ಈಗಾಗಲೇ ಸಲಾರ್‌ 1 ಬಿಡುಗಡೆ ಆಗಿದೆ. ಪಾರ್ಟ್‌ 2 ಕೆಲಸಗಳು ನಡೆಯುತ್ತಿವೆ. ಇದೀಗ ಇದೇ ಪ್ರಭಾಸ್‌ ಜತೆಗೆ ಇನ್ನೂ ಎರಡು ಸಿನಿಮಾ ಮಾಡಲು ಹೊಂಬಾಳೆ ನಿರ್ಧರಿಸಿದೆ. ದೊಡ್ಡ ಪರದೆಯ ಮೇಲೆ ಅಷ್ಟೇ ದೊಡ್ಡ ಸದ್ದು ಮಾಡಲು ಈ ಜೋಡಿ ಮತ್ತೆ ಸಿದ್ಧವಾಗಿ ನಿಂತಿದೆ. ಬಹುಕೋಟಿ ಬಜೆಟ್‌ನಲ್ಲಿ, ದೊಡ್ಡ ಕ್ಯಾನ್ವಾಸ್‌ನಲ್ಲಿಯೇ ಈ ಸಿನಿಮಾಗಳು ನಿರ್ಮಾಣವಾಗಲಿವೆ.

ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಪ್ರಭಾಸ್, ಸದ್ಯ ಸಲಾರ್ 2, ರಾಜಾ ಸಾಬ್, ಸ್ಪಿರಿಟ್, ಕಲ್ಕಿ 2 ಮತ್ತು ಫೌಜಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಇದೇ ಲಿಸ್ಟ್‌ಗೆ ಇನ್ನೂ ಎರಡು ಸಿನಿಮಾಗಳು ಸೇರ್ಪಡೆಯಾಗಲಿದೆ. ಅದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಮಾರುಕಟ್ಟೆಯಲ್ಲಿ ತಮ್ಮದೇ ಆದ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿಕೊಂಡಿದ್ದಾರೆ ಪ್ರಭಾಸ್‌. ಈಗ ಇಂಥ ನಟನ ಜತೆಗೆ ಒಟ್ಟು ಮೂರು ಸಿನಿಮಾಗಳನ್ನು ನಿರ್ಮಿಸಲು ಹೊಂಬಾಳೆ ಸಂಸ್ಥೆ ಸನ್ನದ್ಧವಾಗಿದೆ.

ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಈ ಸಹಯೋಗದ ಕುರಿತು ಪ್ರತಿಕ್ರಿಯಿಸಿದ್ದಾರೆ. “ಹೊಂಬಾಳೆ ಫಿಲ್ಮ್ಸ್‌ನ ಮೂಲಕ ನಾವು ಗಡಿಯನ್ನು ಮೀರಿದ ಕಥೆ ಹೇಳುವ ಶಕ್ತಿಯನ್ನು ನಂಬುತ್ತೇವೆ. ಪ್ರಭಾಸ್ ಅವರೊಂದಿಗಿನ ನಮ್ಮ ಸಹಯೋಗವು ಮತ್ತೊಂದು ಹೊಸ ಹೆಜ್ಜೆ. ಅದು ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಮನರಂಜನೆಯನ್ನು ನೀಡುತ್ತದೆ” ಎಂದಿದ್ದಾರೆ.

ಸಲಾರ್ ಭಾಗ 2, ಕಾಂತಾರ 2 ಮತ್ತು ಕೆಜಿಎಫ್ ಅಧ್ಯಾಯ 3 ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳಲಿವೆ. ಜಾಗತಿಕವಾಗಿ ಪ್ರತಿಧ್ವನಿಸುವ ಅದ್ಭುತ ಚಲನಚಿತ್ರವನ್ನು ರಚಿಸುವ ಬದ್ಧತೆಯನ್ನು ಹೊಂಬಾಳೆ ಫಿಲ್ಮ್ಸ್‌ ಈ ಮೂಲಕ ಎತ್ತಿ ತೋರಿಸಲಿದೆ. ಇದೀಗ ಪ್ರಭಾಸ್‌ ಜತೆಗಿನ ಮತ್ತೊಂದು ಮಹತ್ವಾಕಾಂಕ್ಷೆಯ ಹೊಸ ಹೆಜ್ಜೆ ಅಭಿಮಾನಿಗಳು ಮತ್ತು ಸಿನಿಮೋದ್ಯಮದಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಲಿದೆ.

ಈ ಸುದ್ದಿಯನ್ನೂ ಓದಿ | Nitin Chauhaan: ಕ್ರೈಂ ಪೆಟ್ರೋಲ್‌, ಸ್ಪ್ಲಿಟ್ಸ್‌ವಿಲ್ಲಾ ಖ್ಯಾತಿಯ ನಿತಿನ್‌ ಚೌಹಾಣ್‌ ನಿಗೂಢ ಸಾವು; ಆತ್ಮಹತ್ಯೆ ಶಂಕೆ

ಕನ್ನಡದಲ್ಲಿ ಕೆಜಿಎಫ್ ಮತ್ತು ಕಾಂತಾರ, ಬಘೀರ, ತೆಲುಗಿನಲ್ಲಿ ಸಲಾರ್, ತಮಿಳಿನಲ್ಲಿ ರಘು ತಾತಾ ಮತ್ತು ಮಲಯಾಳಂನಲ್ಲಿ ಫಹಾದ್ ಫಾಸಿಲ್ ನಾಯಕನಾಗಿ ನಟಿಸಸಿದ ಧೂಮಮ್ ಸಿನಿಮಾಗಳ ಮೂಲಕ ಸಿನಿ ಮಾರುಕಟ್ಟೆಗಳಲ್ಲಿ ಹೊಂಬಾಳೆ ಫಿಲ್ಮ್ಸ್‌ ತನ್ನದೇ ಆದ ಅಲೆಯನ್ನು ಸೃಷ್ಟಿಸಿದೆ. ಈ ಸಾಹಸಕ್ಕೆ ಇದೀಗ ಪ್ರಭಾಸ್- ಹೊಂಬಾಳೆ ಪಾಲುದಾರಿಕೆ, ಭಾರತೀಯ ಚಿತ್ರರಂಗದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಈ ಮೂಲಕ ಎಲ್ಲೆಡೆ ಸಲ್ಲುವ ಕಥೆಯ ಜತೆಗೆ ಹೊಂಬಾಳೆ ಮತ್ತೊಮ್ಮೆ ಆಗಮಿಸುತ್ತಿದೆ. ಈ ಚಿತ್ರದ ನಿರ್ದೇಶಕರು ಯಾರು, ಪಾತ್ರವರ್ಗದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.