Wednesday, 6th November 2024

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು

ಬೆಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ  ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫ್ಯಾಟ್ ರಿಡಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ರಾಜಾಜಿನಗರ ಬಳಿ ಇರುವ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಚೇತನಾ ಅವರ ದೇಹದ ಕೊಬ್ಬು ತೆಗೆಯುವ ವೇಳೆ, ಶ್ವಾಸಕೋಶಕ್ಕೆ ನೀರು ಸೇರಿಕೊಂಡಿದ್ದು, ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

22 ವರ್ಷ ವಯಸ್ಸಿನ ಚೇತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದೂರಿದ್ದಾರೆ. ಆಸ್ಪತ್ರೆ ಬಳಿ ಚೇತನಾರ ಅಪ್ಪ ವರದರಾಜ್ ಹಾಗೂ ತಾಯಿ ಲಕ್ಷ್ಮಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಈ ಬೇಡದ ಸರ್ಜರಿ ಬಗ್ಗೆ ಆಕೆ ತಲೆಗೆ ಇಲ್ಲಿನ ವೈದ್ಯರುಗಳೇ ತುಂಬಿದ್ದಾರೆ. ಅನಗತ್ಯ ಸರ್ಜರಿಗೆ ಒಳಪಟ್ಟು ಆಕೆಯನ್ನು ಕಳೆದುಕೊಂಡೆವು ಎಂದು ಚೇತನಾ ಅವರ ಆಪ್ತರು ಗೋಳು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಅಬ್ಬಿಗೆರೆ ಮೂಲದ ಚೇತನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದರು. ಹವಾಯಾಮಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಈಕೆ, ಜನಪ್ರಿಯ ಮನರಂಜನಾ ವಾಹಿನಿಯ ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸಿದ್ದರು ಎಂದು ತಿಳಿದು ಬಂದಿದೆ.