Wednesday, 11th December 2024

ಉಸ್ತುವಾರಿ ತಂದಿರುವ ಉರಿ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಇಂಧನ ಕೊರತೆಯಿಂದ ಸೋಲುಂಡ ಸೈನಿಕ, ಇಂಧನ ಖಾತೆ ನೀಡದಕ್ಕೆ ಸಮರ 

ಸಿಡಿಯದ ಯೋಗೇಶ್ವರ ಅಸ್ತ್ರ

ಮುಂದೆ ಸಹಿ ಸಂಗ್ರಹ ಅಸ್ತ್ರ, ಸಿಎಂ ಬಣದಿಂದಲೂ ಪ್ರತಿತಂತ್ರ

ಸಚಿವ ಸಿ.ಪಿ.ಯೋಗೇಶ್ವರ್ ರಾಜ್ಯ ಸರಕಾರದ ನಾಯಕತ್ವ ಬದಲಾಯಿಸುವ ಪ್ರಯತ್ನದ ಹಿಂದೆ ನಿಜಕ್ಕೂ ಪಕ್ಷ ರಕ್ಷಣೆ ಉದ್ದೇಶವಿದೆಯೇ?
ಇಂಥ ಸಂಶಯಾಸ್ಪದ ಪ್ರಶ್ನೆ ಈಗ ಪಕ್ಷದವರೇ ಕೇಳುವ ಪರಿಸ್ಥಿತಿ ಬಂದಿದೆ. ಏಕೆಂದರೆ, ಯೋಗೇಶ್ವರ್ ಕಳೆದ ಮೂರು ತಿಂಗಳಿನಿಂದ ಕೆಲವು ಸಚಿವರು, ಶಾಸಕರನ್ನು ಕಟ್ಟಿಕೊಂಡು ದಿಲ್ಲಿಗೆ ದಂಡೆಯಾತ್ರೆ ವಿಫಲವಾಗಿದ್ದು, ಈ ಯಾತ್ರೆ ಹಿಂದೆ ನಿಜಕ್ಕೂ ಪಕ್ಷ ಮತ್ತು ಸರಕಾರ ರಕ್ಷಣೆ ಉದ್ದೇಶವಾಗಿತ್ತೇ? ಹಾಗಿದ್ದರೆ ಏಕೆ ವಿಫಲವಾಯಿತು? ಏಕೆ ಹೆಚ್ಚಿನ ಶಾಸಕರ ಬೆಂಬಲ ಏಕೆ ಸಿಗಲಿಲ್ಲ ಎನ್ನುವ ಪ್ರಶ್ನೆಗಳೂ ಪಕ್ಷದೊಳಗೆ ಎದ್ದಿವೆ.

ಗುರುವಾರ ಸುದ್ದಿಗಾರರೊಂದಿಗೆ ದಿಲ್ಲಿಯ ಪ್ರಯತ್ನಗಳನ್ನು ಬಿಚ್ಚಿಟ್ಟಿರುವ ಯೋಗೇಶ್ವರ್ ಅವರು, ನಾಯಕತ್ವ ಬದಲಿಸುವ ಪ್ರಯತ್ನ ನನ್ನದಲ್ಲ. ಆ ಶಕ್ತಿ ನನಗಿಲ್ಲ. ಬದಲಾಗಿ ಮುಂಬರುವ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಮತ್ತು ಈಗಿನ ಸರಕಾರವನ್ನು ಉಳಿಸಬೇಕೆನ್ನುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟನೆಗಳನ್ನು ಗಮನಿಸಿದರೆ ಯೋಗೇಶ್ವರ್ ಅವರ ಪ್ರಯತ್ನದ ಹಿಂದೆ ಯಾವ ಹಿತರಕ್ಷಣೆ ಉದ್ದೇಶವಿದೆ ಎಂದು ಪಕ್ಷದ ಹಿರಿಯರು ಅನುಮಾನ ವ್ಯಕ್ತಪಡಿಸು ತ್ತಾರೆ.

ನಿಜಕ್ಕೂ ಯೋಗೇಶ್ವರ ಬೇಡಿಕೆ ಏನು?
ಯೋಗೇಶ್ವರ್ ಹೇಳಿಕೊಂಡಿರುವಂತೆ ಅವರಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಸಮಸ್ಯೆಗಳಿವೆ. ಇದನ್ನು ವರಿಷ್ಠರಿಗೆ ಹೇಳಿಕೊಳ್ಳಲು ಆಗಾಗ ಹೋಗುತ್ತಾರೆ. ಅಂದರೆ ಈ ಪ್ರಯತ್ನವನ್ನು ಅವರು ಮತ್ತೆ ಮುಂದುವರಿಸುವವರಿದ್ದಾರೆ ಎಂದೂ ಹೇಳಿ ಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಯೋಗೇಶ್ವರ ಹೇಳಿಕೊಂಡಿರುವ ವೈಯಕ್ತಿಕ ಸಮಸ್ಯೆ ಎಂದರೆ ಇಂಧನ ಖಾತೆ ಎನ್ನಲಾಗಿದೆ. ಕಾಂಗ್ರೆಸ್‌ ನಿಂದ ಶಾಸಕರನ್ನು ಕರೆತಂದು ಸರಕಾರ ರಚಿಸಲು ನೆರವಾದ ತಮಗೆ ಸಾಧಾರಣ ಖಾತೆ ನೀಡಿ, ತಾವು ಕರೆತಂದ ಶಾಸಕರಿಗೆ ಉತ್ತಮ ಖಾತೆ ನೀಡಿರುವುದು ಅವರಿಗೆ ತೀವ್ರ ಅಸಮಾಧಾನ ತಂದಿದೆ ಎಂದೂ ಹೇಳಲಾಗಿದೆ.

ಉಸ್ತುವಾರಿ ಏಕೆ ಸಿಗುತ್ತಿಲ್ಲ?
ಇದೆಲ್ಲಕ್ಕಿಂತ ಮುಖ್ಯವಾಗಿ ರಾಮನಗರದಲ್ಲಿ ತನ್ನದೇ ಸಾಮ್ರಾಜ್ಯ ವಿಸ್ತರಿಸಲು ಬೇಕಾದ ಜಿಲ್ಲಾ ಉಸ್ತುವಾರಿ ಹಾಗೂ ಬೇಕಾದ ಅಧಿಕಾರಿಗಳು,ಅನುದಾನ ನೀಡಬೇಕೆಂಬ ಪ್ರಬಲ ಬೇಡಿಕೆಗಳನ್ನೂ ಅವರು ಸಿಎಂ ಮುಂದೆ ಮಂಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬೇಡಿಕೆಗಳಿಗೆ ಯಡಿಯೂರಪ್ಪ ಅಸಾಧ್ಯ ಎಂದಿದ್ದಾರೆ. ಏಕೆಂದರೆ, ಚುನಾವಣೆಯಲ್ಲಿ ಸೋತಿದ್ದ ಯೋಗೇಶ್ವರ ಅವರನ್ನು ವಿಧಾನಪರಿಷತ್ ಸದಸ್ಯತ್ವ ನೀಡಿದ್ದಕ್ಕೇ ಪಕ್ಷ ದೊಳಗೆ ಭಾರೀ ವಿರೋಧ ಬಂದಿತ್ತು. ಅದನ್ನೂ ಮೀರಿ ಸಚಿವ ಸ್ಥಾನ ನೀಡಿ ಯಡಿಯೂರಪ್ಪ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ. ಇನ್ನು ಕೇಳಿದ ರಾಮನಗರ ಉಸ್ತುವಾರಿಯನ್ನೂ ನೀಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗುಬೇಕಾಗುತ್ತದೆ ಎನ್ನುವ ಆತಂಕ ಸಿಎಂ ಅವರದು.

ಶಾಸಕ ರೇಣುಕಾಚಾರ್ಯ ಪ್ರಕಟಿಸಿರುವಂತೆ ಈಗಾಗಲೇ 67 ಶಾಸಕರು ಸಹಿ ಮಾಡಿರುವ ಪತ್ರ ತಮ್ಮ ಬಳಿ ಇದೆ. ಇದನ್ನಾಧರಿಸಿ ಯೋಗೇಶ್ವರ್ ಅವರನ್ನು ಸಂಪುಟದಿಂದ ಮಾತ್ರವಲ್ಲ. ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ತಿರುಗಿ ಬಿದ್ದ ಆಪ್ತರು

ಶಾಸಕರು ಸಚಿವ ಯೋಗೇಶ್ವರ ಅವರು ನಡೆಗೆ ಸಚಿವರು ಹಾಗೂ ಅನೇಕ ಶಾಸಕರು ವಿರೋಧ ವ್ಯಕ್ತಪಡಿಸಿ ದ್ದಾರೆ. ಅಷ್ಟೇ ಏಕೆ ಆಪ್ತರಾಗಿದ್ದ ವಲಸಿಗ ಸಚಿವರು, ಶಾಸಕರೂ ಈಗ ತಿರುಗಿ ಬಿದ್ದಿದ್ದಾರೆ. ಸಚಿವ ಭೈರತಿ ಬಸವರಾಜು, ಕೆ. ಗೋಪಾಲಯ್ಯ, ಎಂ.ಟಿ.ಬಿ. ನಾಗರಾಜ, ಎಸ್.ಟಿ. ಸೋಮಶೇಖರ್, ಹಿರಿಯ ಸಚಿವರಾದ ಆರ್.ಅಶೋಕ್, ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ರಾಜೂಗೌಡ, ಎಂಪಿ.ಕುಮಾರಸ್ವಾಮಿ, ಅಪ್ಪಚ್ಚು ರಂಜನ್, ನಿರಂಜನ್ ಕುಮಾರ್ ಸೇರಿದಂತೆ ಅನೇಕರು ಈಗ ಯೋಗೇಶ್ವರ ನಡೆಯನ್ನು ಟೀಕಿಸಿದ್ದಾರೆ.